ADVERTISEMENT

ಬಿಎಸ್‌ವೈ ವಿಶ್ವಾಸಮತ: ಯಾರು ಏನೆಂದರು?

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:05 IST
Last Updated 29 ಜುಲೈ 2019, 20:05 IST
ಯಡಿಯೂರಪ್ಪ
ಯಡಿಯೂರಪ್ಪ   

‘3 ವರ್ಷ 10 ತಿಂಗಳಲ್ಲಿ ಜನ ಮೆಚ್ಚುವ ಆಡಳಿತ ನಡೆಸುವೆ. ವಿಶ್ವಾಸದ್ರೋಹ ಹಾಗೂ ನಂಬಿಕೆದ್ರೋಹ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಪಾದಿಸಿದರು. ‘ಬಿಜೆಪಿಗೆ ಜನಾದೇಶ ಸಿಕ್ಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಕ್ಕೆ ತಕ್ಕಂತೆ ಸರ್ಕಾರ ರಚನೆಯಾಗಿಲ್ಲ’ ಎಂದು ಕಾಂಗ್ರೆಸ್‌–ಜೆಡಿಎಸ್‌ ನಾಯಕರು ಜರಿದರು. ಯಡಿಯೂರಪ್ಪ ಅವರಿಗೆ ಪದೇ ಪದೇ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ರಚನೆಯ ಕ್ರಮವನ್ನು ಟೀಕಿಸಿದರು. ‘ಇವತ್ತು ಮಾತ್ರ ಅಭಿನಂದನೆ. ಮುಂದೆ ಬರೀ ನಿಂದನೆ ಅಲ್ಲವೇ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಚಟಾಕಿ ಹಾರಿಸಿದರು. ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ವೇಳೆ ನಾಯಕರು ಆಡಿದ ಮಾತಿನ ಝಲಕ್‌ ಇಲ್ಲಿದೆ.

ಜನ ಮೆಚ್ಚುವ ಆಡಳಿತ: ಯಡಿಯೂರಪ್ಪ

* ಬಸವಾದಿ ಶರಣರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ. ಮಹಾತ್ಮ ಗಾಂಧೀಜಿ ಹಾಗೂ ಬಿ.ಆರ್‌.ಅಂಬೇಡ್ಕರ್‌ ಅವರಿಗೆ ವಂದಿಸುತ್ತೇನೆ. ನಾಡಿನ ಆಶೋತ್ತರಗಳಿಗೆ ಅನುಗುಣವಾಗಿ ಈ ಸರ್ಕಾರ ರಚನೆಯಾಗಿದೆ. ನಾನು ಮುಖ್ಯಮಂತ್ರಿಯಾಗಿರುವುದು ಅವರಿಗೆ ಸಂದ ಗೌರವ.

ADVERTISEMENT

* ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸೇಡಿನ ರಾಜಕಾರಣ ಮಾಡಲಿಲ್ಲ. ನಾನು ಸಹ ಸೇಡಿನ ರಾಜಕಾರಣ ಮಾಡುವುದಿಲ್ಲ. ದ್ವೇಷ ಮಾಡುವವರನ್ನೂ ಪ್ರೀತಿಯಿಂದ ಕಾಣುತ್ತೇನೆ.

* ಅಭಿವೃದ್ಧಿಯೇ ನಮ್ಮ ಸರ್ಕಾರದ ಏಕೈಕ ಗುರಿ. ನಾಲ್ಕೈದು ತಿಂಗಳಲ್ಲೇ ಇದು ರಾಜ್ಯದ ಜನರ ಅರಿವಿಗೆ ಬರಲಿದೆ. ಇದಕ್ಕೆ ವಿರೋಧ ಪಕ್ಷಗಳ ಸಹಕಾರ ಬೇಕು.

* 14 ತಿಂಗಳಲ್ಲಿ ಆಡಳಿತ ಯಂತ್ರ ಕುಸಿದಿತ್ತು. ಅದನ್ನು ಸರಿ ದಾರಿಗೆ ತರಲು ಆದ್ಯತೆ ನೀಡುತ್ತೇನೆ.

* ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌’ ಯೋಜನೆಗೆ ಪೂರಕವಾಗಿ ಪ್ರತಿ ರೈತನಿಗೂ ಎರಡು ಕಂತುಗಳಲ್ಲಿ ₹ 4,000 ನೀಡಲಾಗುವುದು. 2019 ಫೆಬ್ರುವರಿ 30ರವರೆಗೆ ಬಾಕಿ ಉಳಿದಿರುವ ನೇಕಾರರ ₹100 ಕೋಟಿ ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದೆ.

* ನಾನು ಎಲ್ಲಾದರೂ ತಪ್ಪು ನಿರ್ಧಾರ ತೆಗೆದುಕೊಂಡರೆ ವಿರೋಧ ಪಕ್ಷದ ನಾಯಕರು ದೂರವಾಣಿ ಕರೆ ಮಾಡಿದರೆ ಸಾಕು. ಅದನ್ನು ಸರಿಪಡಿಸಿಕೊಳ್ಳುತ್ತೇನೆ. ನಂಬಿಕೆದ್ರೋಹ, ವಿಶ್ವಾಸದ್ರೋಹದ ಕೆಲಸ ಮಾಡುವುದಿಲ್ಲ.

ಎಷ್ಟು ದಿನ ಇರುತ್ತೀರಿ ಗೊತ್ತಿಲ್ಲ: ಸಿದ್ದರಾಮಯ್ಯ

* 14 ತಿಂಗಳಲ್ಲಿ ಆಡಳಿತ ಯಂತ್ರ ಕುಸಿದಿರಲಿಲ್ಲ. ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ. ರೈತರ ಸಾಲ ಮನ್ನಾ, ಋಣಮುಕ್ತ ಸುಗ್ರೀವಾಜ್ಞೆ ಜಾರಿ, ಬಡವರ ಬಂಧು ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಜಾರಿ ಮೂಲಕ ಜನರು ಮೆಚ್ಚುವಂತಹ ಆಡಳಿತ ನಡೆಸಿದ್ದೇವೆ.

* ನಾನು ಮುಖ್ಯಮಂತ್ರಿಯಾಗಿದ್ದಾಗ ‘ರೈತ ಬೆಳಕು ಯೋಜನೆ’ ಘೋಷಣೆ ಮಾಡಿದ್ದೆ. ಒಣ ಬೇಸಾಯ ಮಾಡುವ ರೈತರಿಗೆ ವರ್ಷಕ್ಕೆ ₹10 ಸಾವಿರ ನೀಡುವ ಯೋಜನೆ ಇದಾಗಿದೆ. ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮೈತ್ರಿ ಸರ್ಕಾರದಲ್ಲಿ ಇದು ಜಾರಿಯಾಗಿರಲಿಲ್ಲ. ನೇಕಾರರ ಸಾಲ ಮನ್ನಾ ಮಾಡಲು ನನ್ನ ಅವಧಿಯಲ್ಲಿ ತೀರ್ಮಾನಿಸಲಾಗಿತ್ತು. ಅಧಿಸೂಚನೆ ಹೊರಡಿಸಿದ ಬಳಿಕ ಕೆಲವು ಸ್ಪಷ್ಟನೆ ಕೇಳಲಾಗಿತ್ತು.

* ಯಡಿಯೂರಪ್ಪ ಅವರಿಗೆ ಮೂರು ಸಲವೂ (2008, 2018, 2019) ಜನಾದೇಶ ಸಿಕ್ಕಿರಲಿಲ್ಲ. ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕಂತೆ ನೀವು ಮುಖ್ಯಮಂತ್ರಿ ಆಗಿಲ್ಲ. ಇನ್ನೂ 3 ವರ್ಷ 10 ತಿಂಗಳು ನೀವೇ ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಆಸೆ. ಆದರೆ, ಎಷ್ಟು ದಿನ ಇರುತ್ತೀರಿ ಎಂಬ ಗ್ಯಾರಂಟಿ ಇಲ್ಲ.

ಅತೃಪ್ತರು ಪಿಶಾಚಿಗಳಾದರೆ?: ಕುಮಾರಸ್ವಾಮಿ

* 14 ತಿಂಗಳಲ್ಲಿ ಆಡಳಿತ ಯಂತ್ರ ಕುಸಿದಿತ್ತು ಎಂದು ಬಿಜೆಪಿಯವರು ಬಾಯಿ ಚಪಲಕ್ಕೆ ಆರೋಪ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಈಗ ಅವರ ಕೈಯಲ್ಲೇ ಆಡಳಿತ ಇದೆ. ಯಾವಾಗ ಆಡಳಿಯ ಯಂತ್ರ ಕುಸಿದಿತ್ತು ಎಂಬುದನ್ನು ದಾಖಲೆಗಳ ಸಮೇತ ಜನರ ಮುಂದಿಡಲಿ.

* ಅಧಿಕಾರದಿಂದ ನಿರ್ಗಮಿಸುವ ದಿನವೇ ಋಣಮುಕ್ತ ಕಾಯ್ದೆ ಜಾರಿಯ ಆದೇಶ ಹೊರಡಿಸಿದ್ದೇನೆ. ಅದನ್ನು ಜಾರಿ ಮಾಡಲು ಅಧಿಸೂಚನೆ ಹೊರಡಿಸಿ. ಆ ಮೂಲಕ ಬಡವರಿಗೆ, ಕಷ್ಟದಲ್ಲಿರುವವರಿಗೆ ನೆರವಾಗಿ.

* ಪಾಪದ ಸರ್ಕಾರ ಹೋಗಿದೆ ಎಂದು ಬಿಜೆಪಿಯವರು ಟೀಕೆ ಮಾಡಿದ್ದಾರೆ. ಅವರ ಪವಿತ್ರ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ನೋಡೋಣ.

* ಅತೃಪ್ತ ಶಾಸಕರನ್ನು ಬಿಜೆಪಿಯವರು ಯಾವಾಗ ಪಿಶಾಚಿಗಳನ್ನಾಗಿ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ. ಅತೃಪ್ತರು ವಿಶೇಷ ವಿಮಾನದಲ್ಲಿ ಹೋದರು. ಬರುವಾಗ ವಿಶೇಷ ವಿಮಾನ ಸಿಗಲಿಲ್ಲ. ಅವರನ್ನು ನಡುನೀರಿನಲ್ಲಿ ಕೈಬಿಡುತ್ತಾರೆ ಅಷ್ಟೇ. ಬಿಜೆಪಿಯವರು 17 ಅತೃಪ್ತರಿಗೆ ಅಭಿನಂದನೆ ಸಲ್ಲಿಸಬೇಕೇ ಹೊರತು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗಲ್ಲ.

* ಬಿಜೆಪಿ ಸರ್ಕಾರದ ಒಳ್ಳೆಯ ಕೆಲಸಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಅವ್ಯವಹಾರಗಳ ವಿರುದ್ಧದ ಹೋರಾಟ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.