ADVERTISEMENT

ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಾರ್ವಜನಿಕ ಆಡಳಿತ ಓದಿದವರಿಗೂ ಅವಕಾಶ

‘ಪ್ರಜಾವಾಣಿ’ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 7:35 IST
Last Updated 19 ನವೆಂಬರ್ 2021, 7:35 IST
 ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯಶಾಸ್ತ್ರ ವಿಷಯದ ಸ್ನಾತಕೋತ್ತರ ಪದವಿಗೆ ಸಾರ್ವಜನಿಕ ಆಡಳಿತ ವಿಷಯದ ಸ್ನಾತಕೋತ್ತರ ಪದವಿ ತತ್ಸಮಾನ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇದರಿಂದಾಗಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ರಾಜ್ಯಶಾಸ್ತ್ರ ವಿಷಯದ 98 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅರ್ಹತಾ ಪರೀಕ್ಷೆ (ನೆಟ್‌, ಕೆ–ಸೆಟ್‌) ಪಾಸಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.

ಈ 98 ಹುದ್ದೆಗಳೂ ಸೇರಿ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಜಿ ಆಹ್ವಾನಿಸಿದೆ.

ADVERTISEMENT

ಸಾರ್ವಜನಿಕ ಆಡಳಿತ ವಿಷಯದ ಸ್ನಾತಕೋತ್ತರ ಪದವಿಗೆ ರಾಜ್ಯಶಾಸ್ತ್ರ ವಿಷಯದ ಸ್ನಾತಕೋತ್ತರ ಪದವಿ ತತ್ಸಮಾನ ಎಂದು ಈ ಹಿಂದೆಯೇ ಪರಿಗಣಿಸಿದ್ದ ರಾಜ್ಯ ಸರ್ಕಾರ, ರಾಜ್ಯಶಾಸ್ತ್ರ ವಿಷಯ ಓದಿದವರಿಗೆ ಸಾರ್ವಜನಿಕ ಆಡಳಿತ ವಿಷಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ, ರಾಜ್ಯಶಾಸ್ತ್ರ ವಿಷಯಕ್ಕೆ ಸಾರ್ವಜನಿಕ ಆಡಳಿತ ವಿಷಯ ತತ್ಸಮಾನ ಎಂದು ಪರಿಣಿಸದ ಕಾರಣ, ರಾಜ್ಯಶಾಸ್ತ್ರ ವಿಷಯ ಹುದ್ದೆಗಳಿಗೆ ಸಾರ್ವಜನಿಕ ಆಡಳಿತ ವಿಷಯ ಓದಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ನಿರಾಕರಿಸಿತ್ತು.

ಈ ‘ತಾರತಮ್ಯ’ ನೀತಿಯಿಂದಾಗಿ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿರುವ ಬಗ್ಗೆ ಇದೇ ನ. 4ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಈ ವರದಿಯ ಬಳಿಕ ಎಚ್ಚೆತ್ತುಕೊಂಡ ಉನ್ನತ ಶಿಕ್ಷಣ ಪರಿಷತ್ತಿನ ತಜ್ಞರ ಸಮಿತಿ, ರಾಜ್ಯಶಾಸ್ತ್ರ ವಿಷಯದ ಸ್ನಾತಕೋತ್ತರ ಪದವಿಗೆ ಸಾರ್ವಜನಿಕ ಆಡಳಿತ ವಿಷಯದ ಸ್ನಾತಕೋತ್ತರ ಪದವಿ ತತ್ಸಮಾನ ಎಂದು ಪರಿಗಣಿಸಿದೆ. ಅದರಂತೆ ಉನ್ನತ ಶಿಕ್ಷಣ ಇಲಾಖೆ ಈ ಸಂಬಂಧ ಗೆಜೆಟ್‌ ಪ್ರಕಟಣೆ ಹೊರಡಿಸಿದೆ. ಅಲ್ಲದೆ, ಇನ್ನೂ ಕೆಲವು ವಿಷಯಗಳನ್ನು ತತ್ಸಮಾನ ವಿಷಯಗಳು ಎಂದು ಪರಿಗಣಿಸಿ ಸಮಿತಿ ಶಿಫಾರಸು ಮಾಡಿದೆ. ಅವರು ಆಯಾ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಗೆಜೆಟ್‌ನಲ್ಲಿ ತಿಳಿಸಲಾಗಿದೆ.

ಸಹಾಯಕ ಪ್ರಾಧ್ಯಾಪಕ ಹುದ್ದೆ; ಪರಿಗಣಿಸಿದ ತತ್ಸಮಾನ ವಿಷಯ

ರಾಜ್ಯಶಾಸ್ತ್ರ; ಎಂ.ಎ (ಸಾರ್ವಜನಿಕ ಆಡಳಿತ), ಎಂ.ಎ (ಇಂಟರ್‌ನ್ಯಾಷನಲ್‌ ರಿಲೇಷನ್ಸ್‌)

ಕಂಪ್ಯೂಟರ್‌ ವಿಜ್ಞಾನ; ಎಂ.ಇ, ಎಂ.ಟೆಕ್‌ (ಸಾಫ್ಟ್‌ವೇರ್‌ ಟೆಕ್ನಾಲಜಿ, ಎಂಜಿನಿಯರಿಂಗ್‌), ಎಂ.ಟೆಕ್‌ (ಕಂಪ್ಯೂಟರ್‌ ನೆಟ್‌ವರ್ಕ್‌ ಎಂಜಿನಿಯರಿಂಗ್‌)

ರಸಾಯನ ವಿಜ್ಞಾನ; ಎಂ.ಎಸ್ಸಿ 5 ವರ್ಷದ ಇಂಟೆಗ್ರೇಟೆಡ್‌ ರಸಾಯನವಿಜ್ಞಾನ

ಭೌತ ವಿಜ್ಞಾನ; ಎಂ.ಎಸ್ಸಿ 5 ವರ್ಷದ ಇಂಟೆಗ್ರೇಟೆಡ್ ಭೌತವಿಜ್ಞಾನ

ಎಲೆಕ್ಟ್ರೋನಿಕ್ಟ್‌; ಎಂ.ಟೆಕ್‌ (ಎಲೆಕ್ಟ್ರೋನಿಕ್ಸ್‌/ ಎಲೆಕ್ಟೋನಿಕ್ಸ್ ಆ್ಯಂಡ್‌ ಕಮ್ಯುನಿಕೇಷನ್ಸ್‌/ ಡಿಜಿಟಲ್‌ ಎಲೆಕ್ಟ್ರೋನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್ಟ್/ ಡಿಜಿಟಲ್‌ ಕಮ್ಯುನಿಕೇಷನ್‌ ಆ್ಯಂಡ್‌ ನೆಟವರ್ಕ್‌/ ಕಮ್ಯುನಿಕೇಷನ್‌ ಸಿಸ್ಟಂ)

ಸಸ್ಯವಿಜ್ಞಾನ ; ಎಂ.ಎಸ್ಸಿ ಅನ್ವಯಿಕ ಸಸ್ಯವಿಜ್ಞಾನ

ಪ್ರಾಣಿವಿಜ್ಞಾನ; ಎಂ.ಎಸ್ಸಿ ಅನ್ವಯಿಕ ಪ್ರಾಣಿವಿಜ್ಞಾನ

ಅರ್ಥಶಾಸ್ತ್ರ; ಎಂ.ಎ ಅನ್ವಯಿಕ ಅರ್ಥಶಾಸ್ತ್ರ, ಎಂ.ಎಸ್ಸಿ (ಅಗ್ರಿಕಲ್ಚರಲ್‌ ಎಕಾನಮಿಕ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.