ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ಅನುಯಾಯಿಗಳು ವಿಶ್ವಗುರು ಎನ್ನುತ್ತಿದ್ದರು. ಈಗ ನಿಜವಾದ ವಿಶ್ವಗುರು ಟ್ರಂಪ್. ಅವರ ಅಣತಿಯಂತೆಯೇ ಹೆಜ್ಜೆ ಇಡುವ ಪ್ರಧಾನಿಯನ್ನು ಇನ್ನು ಮುಂದೆ ಯಾರೂ ವಿಶ್ವಗುರು ಎನ್ನಬಾರದು ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಬೇಕೇ? ಬೇಡವೇ ಎಂಬ ತೀರ್ಮಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಾರೆ. ಇದು ಭಾರತದ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ. ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಶಿಮ್ಲಾ ಒಪ್ಪಂದದ ಉಲ್ಲಂಘನೆ. ಪಹಲ್ಗಾಮ್ ಘಟನೆಯ ನಂತರದ ಬೆಳವಣಿಗೆ, ಭಾರತ–ಪಾಕಿಸ್ತಾನ ಬಿಕ್ಕಟ್ಟು ಶಮನಕ್ಕೆ ಅಮೆರಿಕ ಮಧ್ಯಸ್ಥಿಕೆ ಕುರಿತು ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು.
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಪಾಕಿಸ್ತಾನಕ್ಕೆ 1.2 ಬಿಲಿಯನ್ ಸಾಲ ನೀಡಿದೆ. ಅದನ್ನು ತಡೆಯಲು ಭಾರತ ಪ್ರಯತ್ನ ಮಾಡಲಿಲ್ಲ. ಟರ್ಕಿ, ಇರಾನ್, ಸೌದಿ ಅರೇಬಿಯಾ ಸಹ ಭಾರತದ ಪರ ಮಾತನಾಡಲಿಲ್ಲ. ಇದು ಭಾರತದ ನಾಯಕತ್ವದ ಕೊರತೆಯನ್ನು ಬಿಂಬಿಸುತ್ತದೆ ಎಂದರು.
ಭಯೋತ್ಪಾದಕ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಗೆ ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳೂ ಬೆಂಬಲ ನೀಡಿದ್ದವು. ಆದರೆ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಮೊದಲೇ ಅಮೆರಿಕಕ್ಕೆ ಶರಣಾದುದು ವಿಪರ್ಯಾಸ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.