ಎಂ.ಬಿ. ಪಾಟೀಲ
ಬೆಂಗಳೂರು: ಬಜಾಜ್ ಸಮೂಹದ ಮುಕುಂದ ಸುಮಿ ಸಹಭಾಗಿತ್ವದಲ್ಲಿ ಕೊಪ್ಪಳದಲ್ಲಿ ಉಕ್ಕು ತಯಾರಿಕಾ ಘಟಕ ಸ್ಥಾಪನೆಗೆ ಜಪಾನಿನ ಸುಮಿಟಾವೊ ಕಂಪನಿ ₹2,345 ಕೋಟಿ ಹೂಡಿಕೆ ಮಾಡಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಬಂಡವಾಳ ಆಕರ್ಷಣೆಗಾಗಿ ಜಪಾನ್ ಪ್ರವಾಸದಲ್ಲಿರುವ ಅವರು ಸುಮಿಟಾವೊ ಪ್ರತಿನಿಧಿಗಳ ಜತೆಗಿನ ಸಭೆಯ ನಂತರ ಈ ಮಾಹಿತಿ ನೀಡಿದ್ದಾರೆ. ‘ಈ ಘಟಕವು ವಾರ್ಷಿಕ 3.50 ಲಕ್ಷ ಟನ್ ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿರಲಿದೆ. 2028ರ ವೇಳೆಗೆ ಘಟಕ ಕಾರ್ಯಾರಂಭ ಮಾಡಲಿದೆ. ಅಲ್ಲದೆ ಸುಮಿಟಾವೊ ಕಂಪನಿಯು ರಾಜ್ಯದಲ್ಲಿ ಬಯೊಮಾಸ್ ಘಟಕವನ್ನೂ ಸ್ಥಾಪಿಸಲಿದೆ’ ಎಂದಿದ್ದಾರೆ.
‘ಹುಬ್ಬಳ್ಳಿಯಲ್ಲಿರುವ ಎನ್‌ಜಿಇಎಫ್ ಕಾರ್ಖಾನೆಯ ಪುನರಾರಂಭದ ಸಂಬಂಧ ಜೆಎಫ್‌ಇ ಷೋಜಿ ಕಂಪನಿಯ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಲಾಗಿದೆ. ₹400 ಕೋಟಿ ಹೂಡಿಕೆ ಮಾಡಲು ಕಂಪನಿ ಮುಂದೆ ಬಂದಿದೆ. ವಿದ್ಯುತ್‌ಚಾಲಿತ ವಾಹನಗಳ ಮೋಟರ್‌ಗಳ ಕೋರ್‌ಗಳನ್ನು ಈ ಕಾರ್ಖಾನೆಯಲ್ಲಿ ತಯಾರಿಸುವ ಬಗ್ಗೆ ಪರಿಶೀಲನೆ ನಡೆಯಲಿದೆ. ಅದರ ಭಾಗವಾಗಿ ಜೆಎಫ್‌ಇ ಷೋಜಿ ಪ್ರತಿನಿಧಿಗಳನ್ನು ಎನ್‌ಜಿಇಎಫ್ ಕಾರ್ಖಾನೆ ಭೇಟಿಗೆ ಆಹ್ವಾನಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಯಸ್ಕಾವಾ ಕಂಪನಿಯು ಬೆಂಗಳೂರಿನಲ್ಲಿ ಮೋಷನ್ ಕಂಟ್ರೋಲ್ ಮತ್ತು ವೇರಿಯೇಬಲ್ ಫ್ರೀಕ್ವೆನ್ಸಿ ಡ್ರೈವ್‌ನ ತಯಾರಕ ಘಟಕ ಸ್ಥಾಪಿಸುವ ಬಗ್ಗೆ ಆಸಕ್ತಿ ತೋರಿಸಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.