ADVERTISEMENT

ಸಿದ್ಧಾಂತ ಆಧಾರದ ಪಠ್ಯ ಬದಲಾವಣೆಗೆ ಬ್ರೇಕ್‌

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 23:32 IST
Last Updated 16 ಡಿಸೆಂಬರ್ 2023, 23:32 IST
   

ಬೆಂಗಳೂರು: ರಾಜಕೀಯ ಕಾರಣಗಳಿಗಾಗಿ ಯಾವುದೇ ಸಿದ್ಧಾಂತದ ಆಧಾರದಲ್ಲಿ ಪಾಠಗಳನ್ನು ಕಿತ್ತುಹಾಕದೇ, ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚುವ, ನೈಜತೆಗೆ ಹತ್ತಿರವಾದ ಪಾಠಗಳನ್ನು ಬರೆಸಬೇಕು ಎಂದು ಮಂಜುನಾಥ ಜಿ. ಹೆಗಡೆ ಸಂಯೋಜಕರಾಗಿರುವ ರಾಜ್ಯ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬದಲಾಯಿಸಿದ್ದ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಬದಲಾಯಿಸುವುದಾಗಿ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಪಠ್ಯ ಪರಿಷ್ಕರಿಸಲು ಇದೇ ವರ್ಷದ ಸೆ.26ರಂದು ಐದು ಸಮಿತಿಗಳನ್ನು ರಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿತ್ತು. ಐದೂ ಸಮಿತಿಗಳಿಗೆ ಮಂಜುನಾಥ ಜಿ. ಹೆಗಡೆ ಅವರನ್ನು ಸಂಯೋಜಕರನ್ನಾಗಿ ನೇಮಿಸಿತ್ತು. ಸಮಿತಿಯ ಬಹುತೇಕ ಕಾರ್ಯಪೂರ್ಣಗೊಂಡಿದ್ದು, ಜನವರಿ (2024) ಮೂರನೇ ವಾರದಲ್ಲೇ ಸಮಿತಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ,  ರೋಹಿತ್‌ ಚಕ್ರತೀರ್ಥ ಸಮಿತಿ ಮಾಡಿದ್ದ ಬದಲಾವಣೆಗಳಲ್ಲಿ ಬಹುಮುಖ್ಯವಾದವುಗಳನ್ನು ಕೈಬಿಟ್ಟು ಹಿಂದಿನ ಪಠ್ಯಕ್ರಮವನ್ನೇ ಬೋಧಿಸುವಂತೆ ಆದೇಶಿಸಿತ್ತು. ರದ್ದಾದ ವಿಷಯಗಳ ಬದಲಿಗೆ ಅನುಸರಿಸಲು ಸೂಚಿಸಿದ್ದ ಪಾಠಗಳನ್ನು ಪ್ರತ್ಯೇಕವಾಗಿ ಮುದ್ರಿಸಿ ಶಾಲೆಗಳಿಗೆ ಕಳುಹಿಸಿತ್ತು. ಆದರೆ, ಸಂಪೂರ್ಣ ಪರಿಷ್ಕರಣೆ ಮಾಡಿರಲಿಲ್ಲ. ಮೂಲಗಳ ಪ್ರಕಾರ, ಹೊಸ ಪಠ್ಯಪರಿಷ್ಕರಣಾ ಸಮಿತಿಯು ರೋಹಿತ್ ಚಕ್ರತೀರ್ಥ ಮಾರ್ಪಾಡಿಸಿದ ಕೆಲ ವಿಷಯಗಳನ್ನು  ಉಳಿಸಿಕೊಂಡಿದೆ. ಆದರೆ, ವ್ಯಕ್ತಿ ವೈಭವೀಕರಣಕ್ಕೆ ಅವಕಾಶ ನೀಡಿಲ್ಲ.  

ADVERTISEMENT

’ಪರಿಷ್ಕರಣೆ ಎಂದರೆ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್‌, ಮೈಸೂರು ಆಳಿದ ಟಿಪ್ಪು ಸುಲ್ತಾನ್ ಕುರಿತ ಪಾಠಗಳನ್ನು ಕೈಬಿಡುವುದಲ್ಲ. ಬಿಜೆಪಿ ಅವಧಿಯಲ್ಲೂ ಟಿಪ್ಪುಸುಲ್ತಾನರ ವೈಭವೀಕರಣವನ್ನು ತಡೆಯಲಾಗಿತ್ತು. ಅದೇ ಮಾದರಿಯನ್ನು ನಾವು ಹೊಸ ಪಠ್ಯಕ್ರಮದಲ್ಲಿ ಅಳವಡಿಸಲು ಶಿಫಾರಸು ಮಾಡುತ್ತಿದ್ದೇವೆ‘ ಎಂದು ಸಮಿತಿಯ ಪ್ರಮುಖರೊಬ್ಬರು ’ಪ್ರಜಾವಾಣಿ‘ಗೆ ಮಾಹಿತಿ ನೀಡಿದರು. 

ಶಾಲಾ ಪಠ್ಯಪುಸ್ತಕಗಳನ್ನು ಪುನರ್‌ ಬರೆಸಬೇಕು ಎನ್ನುವುದು ಸಮಿತಿಯ ಪ್ರಮುಖ ಶಿಫಾರಸುಗಳಲ್ಲಿ ಒಂದು. ಅದನ್ನೇ ಪ್ರಧಾನವಾಗಿ ಅನುಸರಿಸಬೇಕು ಎಂದು ಸಮಿತಿ ಬಲವಾಗಿ ಪ್ರತಿಪಾದಿಸಿದೆ. 

’ಈಗ ಬೋಧಿಸುತ್ತಿರುವ ಪಠ್ಯಪುಸ್ತಕಗಳು ಕನಿಷ್ಠ ಒಂದು ದಶಕದಷ್ಟು ಹಳೆಯವು, ಸರ್ಕಾರಗಳು ಬದಲಾದಾಗಲೆಲ್ಲ ಅದೇ ಪಾಠಗಳಿಗೆ ಒಂದಷ್ಟು ಸೇರಿಸುವ, ತೆಗೆದುಹಾಕುವ ಕೆಲಸ ಮಾಡಲಾಗುತ್ತಿದೆ. ಆದರೆ, ಪಠ್ಯಪುಸ್ತಕಗಳನ್ನು ತಕ್ಷಣವೇ ಮರು ಬರೆಸಲು ಕ್ರಮ ಕೈಗೊಳ್ಳಬೇಕು‘ ಎಂದು ಸಮಿತಿ ಶಿಫಾರಸು ಮಾಡುತ್ತಿದೆ.

ಕನ್ನಡ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ, ಕನ್ನಡ ತೃತೀಯ ಭಾಷೆ, 6, 7ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 8,9, 10ನೇ ತರಗತಿಯ ಸಮಾಜ ವಿಜ್ಞಾನಕ್ಕೆ ಪ್ರತ್ಯೇಕವಾಗಿ ಸಮಿತಿಗಳನ್ನು ರಚಿಸಲಾಗಿತ್ತು. ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಸಮಿತಿ ನೀಡುವ ಶಿಫಾರಸಿನ ಮೇಲೆ ಪರಿಷ್ಕೃತ ಪಠ್ಯಪುಸ್ತಕಗಳನ್ನು 2024-25ನೇ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲಾಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.