ADVERTISEMENT

Bannerghatta National Park | ಬನ್ನೇರುಘಟ್ಟಕ್ಕೆ ಚಿಂಪಾಂಜಿ, ಚೀತಾ, ಜಾಗ್ವಾರ್‌

ಸಫಾರಿಗೆ ವಿದ್ಯುತ್ ಚಾಲಿತ ವಾಹನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 0:30 IST
Last Updated 19 ಜೂನ್ 2025, 0:30 IST
Bannerghatta Biological Park. Photo by S K Dinesh
Bannerghatta Biological Park. Photo by S K Dinesh   

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಚಿಂಪಾಂಜಿ, ಬೇಟೆ ಚೀತಾ, ಜಾಗ್ವಾರ್‌ ಸೇರಿ ವಿದೇಶಿ ಮೂಲದ 10 ಅಪರೂಪದ ವನ್ಯಜೀವಿಗಳನ್ನು ಸೇರ್ಪಡೆಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ದೇಶದ ಪ್ರಥಮ ವಿದ್ಯುತ್‌ ಚಾಲಿತ ಸಫಾರಿ ಬಸ್‌ನ ಪ್ರಾಯೋಗಿಕ ಸಂಚಾರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರಂಭಿಸಲಾಗಿದ್ದು, ಈ ಉಪಕ್ರಮಕ್ಕೆ ವಿಕಾಸಸೌಧದಿಂದ ಬುಧವಾರ ವರ್ಚುವಲ್‌ ಮೂಲಕ ಚಾಲನೆ ನೀಡಿದ ಖಂಡ್ರೆ ಅವರು, ಬಳಿಕ ಮಾತನಾಡಿದರು.

‘ಮುಂದಿನ ನಾಲ್ಕು– ಐದು ತಿಂಗಳಲ್ಲಿ ಬೇಟೆ ಚೀತಾ, ಕ್ಯಾಪಚಿನ್‌ ಕೋತಿಗಳು ದಕ್ಷಿಣ ಅಮೆರಿಕಾದಿಂದ ಬರಲಿವೆ. ಮುಂದಿನ ವರ್ಷ ಚಿಂಪಾಂಜಿ, ಜಾಗ್ವಾರ್‌, ಪೂಮಾ (ಉತ್ತರ ಅಮೆರಿಕಾ ಸಿಂಹ) ಸೇರಿ ಒಟ್ಟು 10 ವಿದೇಶಿ ವನ್ಯಜೀವಿಗಳನ್ನು ತರಲಾಗುವುದು. ಇದರಿಂದ ಬನ್ನೇರುಘಟ್ಟ ಉದ್ಯಾನದ ಆಕರ್ಷಣೆ ಹೆಚ್ಚಲಿದೆ’ ಎಂದು ಖಂಡ್ರೆ ಹೇಳಿದರು.

ADVERTISEMENT

ವಿದ್ಯುತ್‌ ಚಾಲಿತ ವಾಹನ:

ಬನ್ನೇರುಘಟ್ಟದಲ್ಲಿರುವ ವನ್ಯಜೀವಿ ಸಫಾರಿಯಲ್ಲಿ ಹುಲಿ, ಸಿಂಹ, ಕರಡಿಗಳ ವೀಕ್ಷಣೆಗೆ ಡೀಸೆಲ್‌ ವಾಹನಗಳನ್ನು ಬಳಸಲಾಗುತ್ತಿದೆ. ಈ ವಾಹನಗಳಿಂದ ಹೊರ ಹೊಮ್ಮುವ ಇಂಗಾಲದ ಪ್ರಮಾಣ ತಗ್ಗಿಸುವ ಉದ್ದೇಶದಿಂದ ದೇಶದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ವಿದ್ಯುತ್‌ಚಾಲಿತ ವಾಹನ ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿದ್ಯುತ್‌ ಚಾಲಿತ ಬಸ್‌ 22 ಆಸನಗಳನ್ನು ಹೊಂದಿದ್ದು, 100 ಕೆ.ವಿ.ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಎರಡು ಗಂಟೆ ಚಾರ್ಜ್‌ ಮಾಡಿದರೆ 160 ಕಿ.ಮೀ ನಷ್ಟು ಅಂದರೆ ಎಂಟು ಟ್ರಿಪ್‌ ಸಂಚರಿಸಲಿದೆ.  ಈಗ ಒಂದು ವಿದ್ಯುತ್‌ ಚಾಲಿತ ಬಸ್‌ ಮಾತ್ರವೇ ಕಾರ್ಯಾರಂಭ ಮಾಡುತ್ತಿದೆ. 2027ರೊಳಗೆ ಬನ್ನೇರುಘಟ್ಟ ಉದ್ಯಾನವನ್ನು (ಟ್ರ್ಯಾಕ್ಟರ್‌ ಇತ್ಯಾದಿ ಉಪಯೋಗಿ ವಾಹನ ಹೊರತುಪಡಿಸಿ) ಪಳೆಯುಳಿಕೆ ಇಂಧನ ರಹಿತ ವಾಹನ ವಲಯವಾಗಿ ಪರಿವರ್ತಿಸಲಾಗುವುದು ಎಂದು ಖಂಡ್ರೆ ಹೇಳಿದರು.

ಬನ್ನೇರುಘಟ್ಟಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ, ಇಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಶೀಘ್ರವೇ ಟೆಂಡರ್‌ ಕರೆಯಲಾಗುವುದು. ಮೇ ತಿಂಗಳಿನಲ್ಲಿ ಸುಮಾರು 2.85 ಲಕ್ಷ ಪ್ರವಾಸಿಗರು ಬಂದಿದ್ದರು. ಇದು ದಾಖಲೆಯಾಗಿದ್ದು, ಚಿರತೆ ಸಫಾರಿ ಈಗ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದು ಹೇಳಿದರು.

ಜೀಬ್ರಾ ಸಾವಿನ ತನಿಖೆ:

‘ಇತ್ತೀಚೆಗೆ ಜೀಬ್ರಾ ಮತ್ತು ನೀಲಗಾಯ್‌ಗಳು ಸಾವಿಗೀಡಾಗಿವೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಿಸಿಎಫ್‌ ಅವರಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು. ಇನ್ನು ಮುಂದೆ ಮೃಗಾಲಯದಲ್ಲಿ ಮತ್ತು ಜೈವಿಕ ಉದ್ಯಾನದಲ್ಲಿ ಯಾವುದೇ ವನ್ಯಜೀವಿ ಅಸಹಜ ಸಾವನ್ನಪ್ಪದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಖಂಡ್ರೆ ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ನೂತನವಾಗಿ ಮೃಗಾಲಯ ನಿರ್ಮಿಸಲಾಗುತ್ತಿದ್ದು, ಡಿಸೆಂಬರ್‌ ವೇಳೆಗೆ ಮೃಗಾಲಯ ಸಿದ್ಧವಾಗಲಿದೆ ಎಂದರು.

ಚಿರತೆ (ಸಾಂದರ್ಭಿಕ ಚಿತ್ರ)

ಬೃಹತ್‌ ಮತ್ಸ್ಯಾಗಾರ ಯೋಜನೆ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬೃಹತ್‌ ಮತ್ಸ್ಯಾಗಾರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಇದಕ್ಕಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್ ಕರೆಯಲಾಗುವುದು. ಉದ್ಯಾನದ ವ್ಯಾಪ್ತಿಯಲ್ಲಿ ಏಳು ಕೆರೆಗಳಿವೆ. ಅಲ್ಲದೇ ಬೆಂಗಳೂರು ಜಲ ಮಂಡಳಿಯಿಂದಲೂ ನೀರು ಪಡೆಯಲಾಗುತ್ತಿದೆ. ಇದರಿಂದ ಮತ್ಸ್ಯಾಗಾರಕ್ಕೆ ನೀರಿನ ಕೊರತೆ ಆಗುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.