ADVERTISEMENT

ಕಸಾಪ ಬೈ–ಲಾ ತಿದ್ದುಪಡಿಗೆ ಆತುರವೇಕೆ? ಬರಗೂರು ರಾಮಚಂದ್ರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 20:30 IST
Last Updated 7 ಫೆಬ್ರುವರಿ 2022, 20:30 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ‘ಭವಿಷ್ಯದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸುವುದರತ್ತ ಗಮನ ಕೇಂದ್ರೀಕರಿಸುವ ಬದಲು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೈ–ಲಾ ತಿದ್ದುಪಡಿಗೆ ಏಕಿಷ್ಟು ಆತುರ ತೋರುತ್ತಿದ್ದೀರಿ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ,ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಮಹೇಶ ಜೋಶಿ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

‘ಕಸಾಪ ಜಿಲ್ಲಾಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದಾರೆ. ಕೆಲವು ತಾಲ್ಲೂಕು ಹಾಗೂ ಹೋಬಳಿಗಳಿಗೂ ಅಧ್ಯಕ್ಷರ ನೇಮಕ ಆಗಿದೆ. ಉಳಿದ ನೇಮಕಾತಿಗಳಿಗೆ ನೀವು ಪೂರ್ಣ ಅವಕಾಶ ನೀಡಿಲ್ಲ ಎಂಬ ಸುದ್ದಿ ಇದೆ. ಪರಿಷತ್ತಿನ ಅಧ್ಯಕ್ಷರಾದ ನೀವು ಎಲ್ಲಾ ಹಂತದ ಪದಾಧಿಕಾರಿಗಳನ್ನು ಒಳಗೊಂಡ ಯೋಜನೆ ರೂಪಿಸಬೇಕು. ಅದು ನಿಮ್ಮ ಹೊಣೆ. ಪರಿಷತ್ತು ಕೈಗೊಳ್ಳಬಹುದಾದ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಆದ್ಯತೆಯ ವಿಷಯವಾಗಬೇಕೆ ಹೊರತು ಬೈ–ಲಾ ತಿದ್ದುಪಡಿಯಲ್ಲ. ಯಾವುದೇ ಕಾರ್ಯಕ್ರಮವನ್ನೂ ಸಂಘಟಿಸದೆ ಬೈ–ಲಾ ತಿದ್ದುಪಡಿಗೆ ನೀವು ನೀಡುತ್ತಿರುವ ಆದ್ಯತೆಯು ಖಂಡಿತ ಅಪೇಕ್ಷಣೀಯವಲ್ಲ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ಕನ್ನಡ ಮತ್ತು ಕನ್ನಡ ಸಾಹಿತ್ಯದ ಒಳಿತಿಗಾಗಿ ಕ್ರಿಯಾ ಯೋಜನೆಗಳನ್ನು ರೂಪಿಸುವುದು ನಿಮ್ಮ ಆದ್ಯತೆಯಾಗಬೇಕು. ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಕೆಲಸಗಳಾಗಬೇಕು. ಇಲ್ಲಿಯವರೆಗೆ ಇಂತಹ ಯಾವ ಕಾರ್ಯಗಳನ್ನೂ ನೀವು ಮಾಡದಿರುವುದು ವಿಷಾದದ ಸಂಗತಿ’ ಎಂದಿದ್ದಾರೆ.

‘ಚಂದ್ರಶೇಖರ ಪಾಟೀಲರು (ಚಂಪಾ) ನಿಧನರಾದ ಬಳಿಕ ಅವರಿಗೆ ಪರಿಷತ್ತಿನಿಂದ ನುಡಿನಮನ ಸಲ್ಲಿಸುವ ಕೆಲಸವನ್ನು ನೀವು ಮಾಡಲಿಲ್ಲ. ಆನ್‌ಲೈನ್‌ ಕಾರ್ಯಕ್ರಮವನ್ನಾದರೂ ಸಂಘಟಿಸಬಹುದಿತ್ತು. ಅದೂ ಆಗಲಿಲ್ಲ. ಆದರೆ ಬೈ–ಲಾ ತಿದ್ದುಪಡಿಗೆ ಮಾತ್ರ ಆತುರಪಡುತ್ತಿದ್ದೀರಿ. ಮೊದಲು ಒಂದಷ್ಟು ಕೆಲಸಗಳನ್ನು ಮಾಡಿ. ಆನಂತರ ಬೈ–ಲಾ ತಿದ್ದುಪಡಿ ಬಗ್ಗೆ ಯೋಚಿಸಿ’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.