ಬೆಂಗಳೂರು: ‘ಸತ್ಯವಂತರಿಗಿದು ಕಾಲವಲ್ಲ… ದುಷ್ಟಜನರಿಗೆ ಸುಭಿಕ್ಷಕಾಲ‘
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪುರಂದರದಾಸರ ಈ ಸಾಲುಗಳನ್ನು ಉಲ್ಲೇಖಿಸಿ ಬಿಜೆಪಿ ಹೈಕಮಾಂಡ್‌ಗೆ ತಿರುಗೇಟು ನೀಡಿದ್ದಾರೆ.
‘ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಪಕ್ಷದೊಳಗೆ ಸುಧಾರಣೆ, ಓರ್ವ ವ್ಯಕ್ತಿಯ ಉತ್ಕೃಷ್ಠತೆಯನ್ನು ತೆಗೆದು ಹಾಕಲು ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿದ್ದಕ್ಕೆ ನನ್ನನ್ನು ಪಕ್ಷದಿಂದ 6 ವರ್ಷ ಉಚ್ಚಾಟಿಸಲಾಗಿದೆ’ ಎಂದು ಹೇಳಿದ್ದಾರೆ.
ತಪ್ಪನ್ನು ತಪ್ಪು ಎಂದು ಹೇಳಿದ್ದಕ್ಕೆ ನನಗೆ ಈ ಬಹುಮಾನ ಸಿಕ್ಕಿದೆ ಎಂದು ಅವರು ಬೇಸರಿಸಿದ್ದಾರೆ.
‘ಕೆಲವು ಸ್ವಾರ್ಥ ಹಿತಾಸಕ್ತಿಗಳು ಕಾರ್ಯಸೂಚಿಯನ್ನು ಯಶಸ್ವಿಯಾಗಿ ನಿರ್ವಹಿಸಿವೆ. ಉಚ್ಚಾಟನೆಗೊಂಡಿದ್ದೇನೆ ಎಂದ ಮಾತ್ರಕ್ಕೆ ಭ್ರಷ್ಟಾಚಾರ, ಕುಟುಂಬ ರಾಜಕೀಯ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಹಿಂದುತ್ವದ ಬಗ್ಗೆ ನನ್ನ ಹೋರಾಟ ನಿಲ್ಲುವುದಿಲ್ಲ. ನಾನು ನನ್ನ ಜನರಿಗೆ ಅದೇ ಹುರುಪು ಮತ್ತು ದೃಢತೆಯಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ಎಲ್ಲಾ ಕಾರ್ಯಕರ್ತರಿಗೆ, ಹಿತೈಷಿಗಳಿಗೆ, ಸ್ನೇಹಿತರಿಗೆ, ಪರಿಚಯಸ್ಥರಿಗೆ, ಸ್ವಾಮೀಜಿಗಳಿಗೆ, ಮಾಧ್ಯಮಗಳಿಗೆ, ಆಧಾರಸ್ತಂಭವಾಗಿರುವ ನನ್ನ ಕುಟುಂಬಕ್ಕೆ ಮತ್ತು ಸರ್ವಶಕ್ತನಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಹೇಳಿದ್ದಾರೆ.
‘ಈ ಬಗ್ಗೆ ಬರೆಯುವಾಗ ನನಗೆ ಪುರಂದರ ದಾಸರ ಪದವೊಂದು ನೆನಪಾಗುತ್ತಿದೆ’ ಎಂದು ಈ ಕೆಳಗಿನ ಪದ ಬರೆದುಕೊಂಡಿದ್ದಾರೆ.
ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗೆ ಸುಭಿಕ್ಷಕಾಲ ||
ಉಪಕಾರ ಮಾಡಿದರೆ ಅಪಕರಿಸುವ ಕಾಲ
ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ
ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ
ಸತ್ಯವಂತರಿಗಿದು ಕಾಲವಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.