ವಿಜಯಪುರ: ‘ಒಬ್ಬರು ಬೆಂಗಳೂರು, ಮತ್ತೊಬ್ಬರು ಹುಬ್ಬಳ್ಳಿಯಲ್ಲಿ ಕುಳಿತುಕೊಂಡು ಏನು ಮಾಡುತ್ತೀರಿ. ಪ್ರಧಾನಿ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ₹10 ಸಾವಿರ ಕೋಟಿ ನೆರೆ ಪರಿಹಾರ ತೆಗೆದುಕೊಂಡು ಬನ್ನಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇಂದ್ರ ಸಚಿವರ ವಿರುದ್ಧ ಕಿಡಿಕಾರಿದರು.
ಗುರುವಾರ ಸುದ್ದಿಗಾರರ ಪ್ರಶ್ನೆಗೆ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಅನಂತಕುಮಾರ್ ಇದ್ದಿದ್ದರೆ ಕರ್ನಾಟಕಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಸದ್ಯ ಮೂವರು ಕೇಂದ್ರ ಸಚಿವರ ಪೈಕಿ ಒಬ್ಬರಾದರೂ ಸೇತುವೆಯಾಗಿ ಕೆಲಸ ಮಾಡಿ’ ಎಂದು ಸಲಹೆ ನೀಡಿದ ಅವರು, ‘ಪ್ರಧಾನಿ ಭೇಟಿ ಮಾಡಲು ನಿಮಗೇ ಸಾಧ್ಯವಾಗುತ್ತಿಲ್ಲ. ಇನ್ನು ನಮಗೇನು ಭೇಟಿ ಮಾಡಿಸುತ್ತೀರಿ’ ಎಂದು ಕಿಚಾಯಿಸಿದರು.
‘ನಾನು 10 ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಅವರ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿಕೊಂಡಿದ್ದೇನೆ. ಹುಬ್ಬಳ್ಳಿಯ ಜೋಡೆತ್ತುಗಳಾದ ಜಗದೀಶ ಶೆಟ್ಟರ್ ಮತ್ತು ಪ್ರಹ್ಲಾದ ಜೋಶಿ ಅವರು ಕೇಂದ್ರದಿಂದ ಪರಿಹಾರ ತರುವ ಜವಾಬ್ದಾರಿ ತೆಗೆದುಕೊಳ್ಳಲಿ, ನಾವೆಲ್ಲರೂ ಬೋಗಿಗಳಂತೆ ಅವರ ಹಿಂದೆ ಹೋಗಲು ಸಿದ್ಧರಿದ್ದೇವೆ’ ಎಂದರು.
‘ಮೋದಿ ಪ್ರಧಾನಿ ಆಗಲಿ ಎಂದು ತಪಸ್ಸು ಮಾಡಿದ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ. ಅವರು ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರ ಕೇಳುವುದರಲ್ಲಿ ತಪ್ಪೇನಿಲ್ಲ. ನಿಮ್ಮ ವೈಫಲ್ಯಗಳನ್ನು ಅವರ ಮೇಲೆ ಏಕೆ ಹಾಕುತ್ತೀರಿ. ಅವರನ್ನು ಬೈದು ನಿಮ್ಮ ಗೌರವ ಅಷ್ಟೇ ಅಲ್ಲ, ಪ್ರಧಾನಿ ಗೌರವವನ್ನು ಕಳೆಯಬೇಡಿ’ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.