ADVERTISEMENT

ಬಿಬಿಎಂಪಿ ಹಾಸಿಗೆ ಹಂಚಿಕೆ ದಂಧೆ: ಸಮಿತಿಯಿಂದ ಮುಖ್ಯ ಆಯುಕ್ತರಿಗೆ ವರದಿ

12 ನಿರ್ದಿಷ್ಟ ಪ್ರಕರಣಗಳ ತನಿಖೆ

​ಪ್ರಜಾವಾಣಿ ವಾರ್ತೆ
Published 5 ಮೇ 2021, 21:15 IST
Last Updated 5 ಮೇ 2021, 21:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವಾರ್‌ ರೂಂಗಳ ಸಿಬ್ಬಂದಿ ಹಾಸಿಗೆ ಹಂಚಿಕೆ ವೇಳೆ ಅವ್ಯವಹಾರ ನಡೆದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಸಮಿತಿ ನೇಮಿಸಿದ್ದು, ಈ ಸಮಿತಿ 12 ನಿರ್ದಿಷ್ಟ ದೂರುಗಳನ್ನು ಪರಿಶೀಲಿಸುತ್ತಿದೆ.

‘ಸಮಿತಿಯು ಪ್ರತಿಯೊಂದು ಪ್ರಕರಣಗಳನ್ನು ಆಳವಾಗಿ ಪರಿಶೀಲನೆ ನಡೆಸುತ್ತಿದೆ. ಈ ಕುರಿತು ಇನ್ನಷ್ಟು ವಿವರ ಸಂಗ್ರಹಿಸುತ್ತಿದೆ. ಬುಧವಾರ ರಾತ್ರಿ ಒಳಗೆ ವರದಿ ಸಲ್ಲಿಸಲಿದೆ’ ಎಂದು ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಬಿಎಂಪಿಯ ದಕ್ಷಿಣ ವಾರ್‌ ರೂಂನ ಸಿಬ್ಬಂದಿಯನ್ನು ಮಾಡಿದ ಬಗ್ಗೆ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಕೋವಿಡ್‌ ವಾರ್‌ ರೂಂ ಸಿಬ್ಬಂದಿ ಎಲ್ಲ ತಾತ್ಕಾಲಿಕ ನೆಲೆಯಲ್ಲಿ ಕಂಪನಿಗಳಿಂದ ನಿಯುಕ್ತರಾದವರು. ಅವರನ್ನು ನೇಮಿಸುವುದು ಹಾಗೂ ಕೆಲಸದಿಂದ ತೆಗೆಯುವ ಬಗ್ಗೆ ವಲಯ ಮಟ್ಟದ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳುತ್ತಾರೆ. 17 ಮಂದಿಯನ್ನು ಕೆಲವು ದಿನಗಳ ಹಿಂದೆಯೇ ಕೆಲಸದಿಂದ ತೆಗೆಯಲಾಗಿದೆ. ಅವರ ವಿರುದ್ಧ ಆಪಾದನೆಗಳ ಬಗ್ಗೆ ವಲಯ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಹಾಸಿಗೆ ಬ್ಲಾಕ್‌ ಮಾಡಿಯೂ ರೋಗಿಗಳನ್ನು ದಾಖಲಿಸದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವಾರ್‌ ರೂಮ್‌ಗಳ ಮೂಲಕ ನಿತ್ಯವೂ 800ರಿಂದ 1000 ಹಾಸಿಗೆಗಳು ಹಂಚಿಕೆ ಆಗುತ್ತಿವೆ ನಾವು ಹಂಚಿಕೆ ಮಾಡಿದ ನಂತರ ಕೆಲವು ರೋಗಿಗಳು ಆಸ್ಪತ್ರೆಗೆ ದಾಖಲಾಗದೇ, ಬೇರಾವುದೋ ಆಸ್ಪತ್ರೆಗೆ ದಾಖಲಾಗುತ್ತಾರೆ. ಆಗ ಅಂತಹ ಹಾಸಿಗೆಗಳನ್ನು ಅನ್‌ ಬ್ಲಾಕ್‌ ಮಾಡಬೇಕಾಗುತ್ತದೆ’ ಎಂದರು.

‘ತಂತ್ರಾಂಶದಲ್ಲಿ ಸಮಗ್ರ ಬದಲಾವಣೆ’

‘ಹಾಸಿಗೆ ಹಂಚಿಕೆ ತಂತ್ರಾಂಶವನ್ನು ಕೋವಿಡ್‌ ಮೊದಲ ಅಲೆಯ ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಸಮಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಐಎಎಸ್‌ ಅಧಿಕಾರಿ ಪೊನ್ನುರಾಜ್‌ ಅಧ್ಯಕ್ಷತೆ ಸಮಿತಿ ಈ ಬಗ್ಗೆ ವರದಿ ನೀಡಲಿದೆ. ಕೆಲವೇ ಕಂಪ್ಯೂಟರ್‌ಗಳಲ್ಲಿ ಮಾತ್ರ ಲಾಗಿನ್‌ ನಡೆಸಲು ಸಾಧ್ಯವಾಗುವಂತೆ ಮಾರ್ಪಾಡು ಮಾಡುವ ಚಿಂತನೆ ಇದೆ’ ಎಂದು ಮುಖ್ಯ ಆಯುಕ್ತರು ತಿಳಿಸಿದರು.

‘ವಾರ್‌ ರೂಂ ನಿರ್ವಹಣೆಗೆ ಐಎಎಸ್‌ ಹಾಗೂ ಕೆಎಸ್‌ ಪ್ರೊಬೇಷನರಿ ಅಧಿಕಾರಿಗಳನ್ನು ಕಳೆದ ವರ್ಷ ಸರ್ಕಾರ ನೇಮಿಸಿತ್ತು. ಅವರನ್ನು ಮಾತೃ ಇಲಾಖೆಗೆ ಮರಳಿ ಕಳುಹಿಸಲಾಗಿತ್ತು. ಸರ್ಕಾರಿ ನೌಕರರಿಗೆ ಹೊಣೆ ವಹಿಸಿದರೆ ವಾರ್‌ರೂಂ ನಿರ್ವಹಣೆ ಸುಲಭ. ಆಡಳಿತಾತ್ಮಕವಾಗಿಯೂ ಕೆಲವು ಸುಧಾರಣೆ ಮಾಡುತ್ತಿದ್ದೇವೆ ಜನರಲ್ಲಿ ಏನು ಸಂದೇಹ ನಿರ್ಮಾಣ ವಾಗಿದೆ ಅದನ್ನು ನಿವಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ’ ಎಂದರು.

‘ವಾರ್‌ ರೂಂಗಗಳಿಗೆ ಸಿಬ್ಬಂದಿ ಒದಗಿಸುವ ಏಜೆನ್ಸಿಗಳ ಕಾರ್ಯವೈಖರಿ ಪರಿಶೀಲಿಸಿ ಅಗತ್ಯ ಬಿದ್ದರೆ ಅವುಗಳನ್ನು ಬದಲಾವಣೆ ಮಾಡುತ್ತೇವೆ. ಪಸಿಟಿವಿಟಿ 35 % ರೇಟ್‌ ಇದೆ. ಇದು ಜಸ್ತಿ ಇರುವುದರಿಂದ ಲ್ಯಾಬ್‌ ಕಿಟ್ಸ್‌ ಪಡೆದು ತ್ವರಿತವಾಗಿ ಪರಿಕ್ಷೆ ಮಾಡಿ ತ್ವರಿತವಗಿ ಫಲಿತಾಂಶ ಸಿಗುವಂತೆ ಮಾಡುತ್ತೇವೆ.

ಹಾಸಿಗೆ ಹಂಚಿಕೆ ಪೋರ್ಟಲ್‌ ಸ್ತಬ್ಧ

ಬುಧವಾರ ರಾತ್ರಿ ವೇಳೆ ಬಿಬಿಎಂಪಿಯ ಹಾಸಿಗೆ ಹಂಚಿಕೆ ಪೋರ್ಟಲ್‌ (https://bbmpgov.com/chbms/) ಕಾರ್ಯ ನಿರ್ವಹಿಸುತ್ತಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಗೌರವ್‌ ಗುಪ್ತ, ‘ಕೆಲವೊಮ್ಮೆ ತೀರಾ ಹೆಚ್ಚು ಮಂದಿ ಏಕಕಾಲಕ್ಕೆ ತಂತ್ರಾಂಶ ಬಳಸಿದರೆ ಈ ರೀತಿ ಆಗುತ್ತದೆ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.