
ಸುವರ್ಣ ವಿಧಾನಸೌಧ (ಬೆಳಗಾವಿ): ಪರಿಶಿಷ್ಟಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದ ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀ ಕರಣ) ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿದೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಕೆಲ ಮಾರ್ಪಾಡಿನೊಂದಿಗೆ ಅನುಮೋದಿಸಿದ್ದ ಸರ್ಕಾರ ಈ ಮಸೂದೆಯನ್ನು ರೂಪಿಸಿತ್ತು.
ಪರಿಶಿಷ್ಟ ಜಾತಿಗೆ ಲಭ್ಯ ಇರುವ ಶೇ 17 ರಷ್ಟು ಮೀಸಲಾತಿಯಲ್ಲಿ ಪ್ರವರ್ಗ–ಎ(16 ಜಾತಿಗಳು) ಶೇ 6, ಪ್ರವರ್ಗ–ಬಿ (19 ಜಾತಿಗಳು) ಶೇ 6, ಪ್ರವರ್ಗ–ಸಿ(63 ಜಾತಿಗಳು) ಶೇ 5, ಒಟ್ಟು 98 ಜಾತಿಗಳಿಗೆ ಒಳ ಮೀಸಲು ಹಂಚಿಕೆಯಾಗಲಿದೆ. ಈ ಮಸೂದೆಗೆ ಹಸಿರು ನಿಶಾನೆ ಸಿಗುತ್ತದೆ ಎಂದು ಕಾದಿದ್ದ ಬಹುದೊಡ್ಡ ಸಮುದಾಯ ನಿರೀಕ್ಷೆ ಈಗ ಫಲ ಕಂಡಿದೆ. ಒಳಮೀಸಲಾತಿ ಕಾಯ್ದೆ 2025ರ ಆ.25 ರಿಂದ ಅನ್ವಯವಾಗಲಿದೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಮಸೂದೆ ಮಂಡಿಸಿದರು. ಚರ್ಚೆ ಇಲ್ಲದೇ ಮಸೂದೆ ಅಂಗೀಕಾರ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.