
ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಂಬಂಧ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಶುಕ್ರವಾರ ರಾತ್ರಿ 9.50ರ ವೇಳೆಗೆ ಈ ಮಸೂದೆಗಳನ್ನು ಮಂಡಿಸಿದರು.
‘ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಯನ್ನು ರಾಷ್ಟ್ರೀಯ ಅಭಿವೃದ್ಧಿಯಾಗಿ ಪರಿಗಣಿಸಿ, ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಕೇಂದ್ರ ಸರ್ಕಾರ ತಕ್ಷಣ ₹ 5 ಸಾವಿರ ಕೋಟಿಯ ‘ವಿಶೇಷ ಕೇಂದ್ರ ನೆರವು’ ಯೋಜನೆಯನ್ನು ರೂಪಿಸಿ ಬಿಡುಗಡೆ ಮಾಡಬೇಕು’ ಎಂಬ ನಿರ್ಣಯಕ್ಕೆ ಅಂಗೀಕಾರ ಪಡೆಯಲಾಯಿತು.
ಇತರ ನಿರ್ಣಯಗಳು:
*ಕೃಷ್ಣಾ ಮೇಲ್ದಂಡೆ ಯೋಜನೆ– 3 ಅನ್ನು ತಕ್ಷಣ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು. ಜೊತೆಗೆ, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–2ರ ಐತೀರ್ಪು ಅನ್ನು ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಅಧಿಸೂಚಿಸಿ ಅನುಷ್ಠಾನಗೊಳಿಸಬೇಕು
*ರಾಯಚೂರು ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಶೀಘ್ರ ಅಂತಿಮ ಅನುಮೋದನೆ ನೀಡಬೇಕು
*ಬೆಂಗಳೂರಿನಲ್ಲಿರುವ 73 ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳನ್ನು ಗುರುತಿಸಿ ಅವುಗಳಲ್ಲಿ ಕನಿಷ್ಠ 25 ಪ್ರಮುಖ ಸಂಸ್ಥೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ವರ್ಗಾಯಿಸಬೇಕು
*ಎಥೆನಾಲ್ ಸಾಮರ್ಥ್ಯಕ್ಕೆ ಅನುಗುಣವಾಗಿ ಕೋಟಾ ಹಂಚಿಕೆ ಪ್ರಮಾಣವನ್ನು ತಕ್ಷಣ ಹೆಚ್ಚಿಸುವ ಮೂಲಕ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸಬೇಕು.
*ಮಹದಾಯಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಮಂಜೂರಾತಿಗಳನ್ನು ತಕ್ಷಣ ನೀಡಬೇಕು
‘ಶೇ 56ರಷ್ಟುಮೀಸಲು : 9 ನೇ ಪರಿಚ್ಛೇದಕ್ಕೆ ಸೇರಿಸಿ’:
‘ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಟ್ಟು ಮೀಸಲಾತಿಯನ್ನು ಶೇ 56ಕ್ಕೆ ಹೆಚ್ಚಿಸುವ ಉದ್ದೇಶದಿಂದ ರೂಪಿಸಿರುವ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಬೇಕು’ ಸೇರಿದಂತೆ ಒಟ್ಟು ಏಳು ನಿರ್ಣಯಗಳನ್ನು ಪರಿಷತ್ತು ಅಂಗೀಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.