ADVERTISEMENT

15ನೇ ವಿಧಾನಸಭೆ: ಬೆಳಗಾವಿಯ ಕೊನೆ ಕದನ - ‘ಕಿತ್ತೂರು ಕರ್ನಾಟಕ’ಕ್ಕಾಗಿ ಕಿತ್ತಾಟ

ಸಾಧನೆ ಬಿಂಬಿಸಿಕೊಳ್ಳಲು ವೇದಿಕೆ

ವೈ.ಗ.ಜಗದೀಶ್‌
Published 18 ಡಿಸೆಂಬರ್ 2022, 22:30 IST
Last Updated 18 ಡಿಸೆಂಬರ್ 2022, 22:30 IST
ವಿಧಾನಸಭಾ ಸಭಾಂಗಣದಲ್ಲಿ ಅಧಿಕಾರಿಗಳು ಭಾನುವಾರ ಉಪಕರಣಗಳನ್ನು ಪರಿಶೀಲಿಸಿದರು -ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ವಿಧಾನಸಭಾ ಸಭಾಂಗಣದಲ್ಲಿ ಅಧಿಕಾರಿಗಳು ಭಾನುವಾರ ಉಪಕರಣಗಳನ್ನು ಪರಿಶೀಲಿಸಿದರು -ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.    

ಬೆಳಗಾವಿ: ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆಗೆ ತಾಲೀಮು ಚುರುಕುಗೊಳಿಸಿರುವ ಹೊತ್ತಿನಲ್ಲೇ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ 10 ದಿನ ನಡೆಯಲಿರುವ ಅಧಿವೇಶನ ಕಿತ್ತೂರು ಭಾಗದ ಜನರ ಮನವೊಲಿಸಿಕೊಳ್ಳುವ ವೇದಿಕೆಯಾಗಲಿದೆ.

15 ವಿಧಾನಸಭೆ ಅವಧಿಯಲ್ಲಿ ಮಹಾರಾಷ್ಟ್ರ ಗಡಿಭಾಗದ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಅಧಿವೇಶನ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಿಗೆ ತಮ್ಮ ಸಾಧನೆಯನ್ನು ಬಿಂಬಿಸಿಕೊಳ್ಳುವ, ಎದುರಾಳಿ ಪಕ್ಷದ ವೈಫಲ್ಯವನ್ನು ಎತ್ತಿ ತೋರಿಸುವ ಅವಕಾಶವನ್ನೂ ತೆರೆದುಕೊಡಲಿದೆ. ಕಿತ್ತೂರು ಕರ್ನಾಟಕ
ವನ್ನು ಪ್ರತಿನಿಧಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾವಿ), ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (ಬಾದಾಮಿ) ಅವರಿಗೆ ತಮ್ಮ ನೇತೃತ್ವದ ಪಕ್ಷ ಈ ಭಾಗದ ಅಭಿವೃದ್ಧಿಗೆ ಮಾಡಿದ್ದೇನು? ತಾವು ಮತ್ತೆ ಅಧಿಕಾರಕ್ಕೆ ಬಂದರೆ ಏನು ಮಾಡಲಿದ್ದೇವೆ ಎಂಬುದನ್ನು ಅಧಿವೇಶನದಲ್ಲೇ ಸಾರಿ ಹೇಳುವ ಕಟ್ಟ ಕಡೆಯ ಅವಕಾಶವೂ ಇದಾಗಿದೆ. ಹೀಗಾಗಿಯೇ ಆಡಳಿತಾರೂಢರ ಯಶಸ್ಸು–ವೈಫಲ್ಯದ ಕೆಸರೆರಚಾಟ ಸಹಜ
ವಾಗಿಯೇ ಈ ಅಧಿವೇಶನದ ಪ್ರಧಾನ ಕೇಂದ್ರವಾಗಿರಲಿದೆ.

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ 24ಗಂಟೆಯೊಳಗೆ ಮಹದಾಯಿ ಯೋಜನೆಯನ್ನು ಅನುಷ್ಠಾನ ಮಾಡುವು
ದಾಗಿ 2018ರ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. 2019ರ ಲೋಕಸಭೆ ಚುನಾವಣೆ ವೇಳೆಯೂ ಪಕ್ಷ ವಾಗ್ದಾನ ಮಾಡಿತ್ತು. ಅದರ ಜತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಬಿಜೆಪಿ, ಕಾಂಗ್ರೆಸ್‌ನ ವಾಗ್ದಾನವಾಗಿತ್ತು. ಸುಮಾರು 10 ವರ್ಷಗಳ ಅವಧಿಯಲ್ಲಿ ಈ ಎರಡೂ ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂಬ ಅಸಮಾಧಾನ ಈ ಪ್ರದೇಶದಲ್ಲಿದೆ. ಈ ವಿಷಯ ಕೂಡ ವಾಗ್ವಾದಕ್ಕೆ ಕಾರಣವಾಗುವ ಸಂಭವವೂ ಇದೆ.

ADVERTISEMENT

ಪ್ರತಿವರ್ಷ ಅಧಿವೇಶನದ ಅವಧಿಯಲ್ಲಿ ಗಡಿ ಕ್ಯಾತೆ ತೆಗೆಯುವ ಕಿಡಿಗೇಡಿ ಕೆಲಸವನ್ನು ಕೆಲವು ಸಂಘಟನೆಗಳು ಮಾಡುತ್ತಲೇ ಬಂದಿದೆ. ಕಳೆದ ವರ್ಷ ಅಧಿವೇಶನದ ವೇಳೆ, ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆಗ ಕೊಟ್ಟ ಭರವಸೆಗಳನ್ನು ಸರ್ಕಾರ ಇನ್ನೂ ಈಡೇರಿಸಿಲ್ಲ. ಗಡಿ ಸಂಗತಿ ಎರಡು ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಲಿದ್ದು, ವಾಗ್ಯುದ್ಧಕ್ಕೆ ದಾರಿ ಮಾಡಿಕೊಡಲಿದೆ.

ಏಕರೂಪ ನಾಗರಿಕ ಸಂಹಿತೆ?

ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿ, ಅಭಿವೃದ್ಧಿಯ ಜತೆಗೆ ಮತೀಯ ವಿಷಯವನ್ನು ಮುನ್ನೆಲೆಗೆ ತಂದು, ಮತ ಬ್ಯಾಂಕ್‌ ಗಟ್ಟಿಗೊಳಿಸಿಕೊಳ್ಳುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಇದೆ.

ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಿತ್ತು. ಈ ಬಾರಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಮಸೂದೆ ಮಂಡಿಸುವ ತಯಾರಿಯಲ್ಲಿದೆ. ಮಸೂದೆಯನ್ನು ಈ ಬಾರಿಯೇ ಸದನದಲ್ಲಿ ಮಂಡಿಸಲು ಸರ್ಕಾರ ಚಿಂತನೆ ನಡೆಸಿದೆ. ಹೀಗೆ ಮಾಡುವ ಮೂಲಕ ಚರ್ಚೆಯ ಕಲಾಪದ ಚರ್ಚೆಯ ದಿಕ್ಕನ್ನೇ ಬದಲಿಸುವ ಆಲೋಚನೆ ಸರ್ಕಾರದ ಮುಂದಿದೆ.

ಗುಜರಾತ್‌ ಚುನಾವಣೆಗೆ ಮುನ್ನ ನಡೆದಿದ್ದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿತ್ತು.

ಬೆಂಗಳೂರು ಕೇಂದ್ರಿತ ಆಡಳಿತವು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸುತ್ತಲೇ ಬರುತ್ತಿದೆ ಎಂಬ ಆಪಾದನೆ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದಾಗ ಬರುತ್ತಲೇ ಇದೆ. ಹೀಗಾಗಿ, ಎಲ್ಲ ಪಕ್ಷದ ರಾಜಕಾರಣಿಗಳು ಒಂದೇ ಕಡೆ ಸಿಗುವ ಇಂತಹ ಸುಸಂದರ್ಭವನ್ನು ಪ್ರತಿಭಟನಾಕಾರರು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.

’ಪ್ರತಿಭಟನೆಗಾಗಿ 61 ಸಂಘಟನೆಗಳು ಅನುಮತಿ ಕೇಳಿವೆ‘ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದಾರೆ. ಹೀಗಾಗಿ, ಪ್ರತಿಭಟನೆ ಬಿಸಿ ಸಹ ಸದನವನ್ನು ಕಾಡಲಿರುವುದು ದಿಟ.

ಕಬ್ಬು ಬೆಳೆಗಾರರ ಒಂದು ಗುಂಪನ್ನು ಸಂಧಾನದ ಮೂಲಕ ಸಂತೈಸುವ ಕೆಲಸವನ್ನು ಸರ್ಕಾರ ಮಾಡಿದೆ. ಆದರೆ, ಮತ್ತೊಂದು ಗುಂಪು ಹೋರಾಟವನ್ನು ತೀವ್ರಗೊಳಿಸುವ ಸಾಧ್ಯತೆ ಇದೆ. ಚುನಾವಣೆ ಎದುರಿಗಿರುವ ಹೊತ್ತಿನೊಳಗೆ ಮೀಸಲಾತಿಯ ಬೇಡಿಕೆಯನ್ನು ವಿವಿಧ ಸಮುದಾಯಗಳು ಮುಂದಿಟ್ಟಿವೆ. ಅಧಿವೇಶನದೊಳಗೆ ಅಥವಾ ವಿಧಾನಸಭೆ ಘೋಷಣೆಯಾಗುವುದಕ್ಕೆ ಮುನ್ನ ಮೀಸಲಾತಿ ಹೆಚ್ಚಳ, ಪಟ್ಟಿಯಲ್ಲಿ ಬದಲಾವಣೆ, ಹೊಸ ಸೇರ್ಪಡೆ ಮಾಡಬೇಕೆಂಬ ಬೇಡಿಕೆಯು ತೀವ್ರಗೊಳ್ಳುತ್ತಲೇ ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಬಳಿಕ ಒಳಮೀಸಲಾತಿ ಬೇಡಿಕೆ ಹೋರಾಟದ ಸ್ವರೂಪಕ್ಕೆ ತಿರುಗಿದೆ. ಒಳಮೀಸಲಾತಿ ನೀಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸೌಲಭ್ಯ ವಂಚಿತ ಸಮುದಾಯ ಆಗ್ರಹ ಮಾಡುತ್ತಿದ್ದರೆ, ನ್ಯಾ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವುದು ಬೇಡ ಎಂದು ಪರಿಶಿಷ್ಟ ಜಾತಿ ಪಟ್ಟಿಯೊಳಗಿರುವ ಪ್ರಬಲ ಜಾತಿಗಳು ಪ್ರತಿಪಾದಿಸುತ್ತಿವೆ. ಮೀಸಲಾತಿ ಹೆಚ್ಚಳವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಸರ್ಕಾರ, ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾಗಿದೆ.

ಅದರ ಜತೆಗೆ, ಲಿಂಗಾಯತ ಪಂಚಮ ಸಾಲಿ ಸಮುದಾಯವನ್ನು 2ಎಗೆ ಸೇರಿಸುವ ಘೋಷಣೆ ಮಾಡಬೇಕು ಎಂದು ಈ ಪ್ರದೇಶದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯ ಪಟ್ಟು ಹಿಡಿದು ಕೂತಿದ್ದು ಗಡುವು ಕೊಟ್ಟಿದೆ. ಇದಕ್ಕೆ, 2ಎ ಪಟ್ಟಿಯಲ್ಲಿರುವ ವಿವಿಧ ಜಾತಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಒಕ್ಕಲಿಗ ಸಮುದಾಯ ಹಕ್ಕೊತ್ತಾಯ ಮಂಡಿಸಿದೆ.

ಇದಲ್ಲದೇ, ಮಳೆಹಾನಿಗೆ ಪರಿಹಾರ, ಕೇಂದ್ರ ಸರ್ಕಾರದ ತಾರತಮ್ಯ ಧೋರಣೆಯನ್ನು ಮುಂದಿಟ್ಟುಕೊಂಡು ಈ ಭಾಗದ ಜನರ ಗಮನ ಸೆಳೆಯುವ ಬಗ್ಗೆ ಕಾಂಗ್ರೆಸ್ ತಯಾರಿ ನಡೆಸಿದೆ. ಜತೆಗೆ, ಕಾಮಗಾರಿಗಳಲ್ಲಿನ ಭ್ರಷ್ಟಾಚಾರ, ಪಿಎಸ್ಐ ಅಕ್ರಮದ ಬಗ್ಗೆ ಕಾಂಗ್ರೆಸ್‌ ಪಕ್ಷ ‘ಪೇಸಿಎಂ’ ಅಭಿಯಾನ ನಡೆಸುತ್ತಿದ್ದು, ಇದು ಸಹ ಚರ್ಚೆಗೆ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.