ADVERTISEMENT

ಗೆಫೆಕ್ಸ್‌ ಮೇಳ: ತಂತ್ರಜ್ಞಾನವೋ, ಕೌಶಲವೋ...

ಕಲಾವಿದ–ಯಂತ್ರಗಳ ಮುಖಾಮುಖಿಗೆ ವೇದಿಕೆಯಾದ ಗೆಫೆಕ್ಸ್‌ ಮೇಳ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 0:27 IST
Last Updated 1 ಮಾರ್ಚ್ 2025, 0:27 IST
<div class="paragraphs"><p>ಕೌಶಲ ಮತ್ತು ತಂತ್ರಜ್ಞಾನ: ನಗರದಲ್ಲಿ ನಡೆಯುತ್ತಿರುವ ಗೆಫೆಕ್ಸ್‌ ಮೇಳದಲ್ಲಿ&nbsp;ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರವನ್ನು ಇರಿಸಿಕೊಂಡು ಕಲಾವಿದರೊಬ್ಬರು 3ಡಿ ಮಾದರಿ ರೂಪಿಸಿದರು. ಮತ್ತೊಬ್ಬ ಕಲಾವಿದ ಅದೇ ಭಾವಚಿತ್ರ ಬಳಸಿಕೊಂಡು ಮಣ್ಣಿನ ಕಲಾಕೃತಿ ರೂಪಿಸಿದರು</p></div>

ಕೌಶಲ ಮತ್ತು ತಂತ್ರಜ್ಞಾನ: ನಗರದಲ್ಲಿ ನಡೆಯುತ್ತಿರುವ ಗೆಫೆಕ್ಸ್‌ ಮೇಳದಲ್ಲಿ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರವನ್ನು ಇರಿಸಿಕೊಂಡು ಕಲಾವಿದರೊಬ್ಬರು 3ಡಿ ಮಾದರಿ ರೂಪಿಸಿದರು. ಮತ್ತೊಬ್ಬ ಕಲಾವಿದ ಅದೇ ಭಾವಚಿತ್ರ ಬಳಸಿಕೊಂಡು ಮಣ್ಣಿನ ಕಲಾಕೃತಿ ರೂಪಿಸಿದರು

   

  –ಪ್ರಜಾವಾಣಿ ಚಿತ್ರ

ಬೆಂಗಳೂರು: ಒಂದೆಡೆ ಕಲಾವಿದನ ಕೈಚಳಕ ಮತ್ತು ಕೌಶಲ. ಮತ್ತೊಂದೆಡೆ ಅವನ್ನು ಸರಿಗಟ್ಟಿಸುವಂತಹ ತಂತ್ರಜ್ಞಾನ. ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರವನ್ನು ಮಾದರಿಯಾಗಿ ಇರಿಸಿಕೊಂಡು ಕಲಾವಿದರೊಬ್ಬರು ಮಣ್ಣಿನ ಕಲಾಕೃತಿ ರೂಪಿಸಿದರು. ಅದೇ ಕಲಾವಿದ ತಿಮ್ಮಕ್ಕ ಅವರ ಭಾವಚಿತ್ರವನ್ನು ಬಳಸಿಕೊಂಡು ತಂತ್ರಜ್ಞಾನದ ಮೂಲಕ 3 ಆಯಾಮದ (3ಡಿ) ಮಾದರಿ ರಚಿಸಿ, ಮುದ್ರಿಸಿದರು. ಎರಡರಲ್ಲಿ ಕಲಾವಿದನ ಕೃತಿ ಯಾವುದು..., ಯಂತ್ರ ಸೃಷ್ಟಿಸಿದ ಪ್ರತಿಮೆ ಯಾವುದು...

ADVERTISEMENT

ಹೀಗೆ ಸೃಜನಶೀಲತೆಯ ಭಿನ್ನ ಆಯಾಮಗಳನ್ನು ಪರಸ್ಪರ ಮುಖಾಮುಖಿಯಾಗಿಸಲು ಅವಕಾಶ ಮಾಡಿಕೊಟ್ಟಿದ್ದು ಬೆಂಗಳೂರು ಗೆಫೆಕ್ಸ್‌–2025 ಮೇಳ. ತಿಮ್ಮಕ್ಕನ ಪ್ರತಿಮೆಯೊಂದು ಉದಾಹರಣೆಯಷ್ಟೆ. ಮೇಳದಲ್ಲಿ ಸೇರಿದ್ದ ಕಲಾವಿದರು ತಮ್ಮ ಕಲ್ಪನೆಗಳಿಗೆ ಮಣ್ಣಿನಲ್ಲಿ ಜೀವ ತುಂಬಿದರು. ಅದನ್ನೇ ಕಂಪ್ಯೂಟರ್‌ಗಳಲ್ಲೂ ರೂಪಿಸಿ, ಪರಸ್ಪರ ಹೋಲಿಸಿ ನೋಡಿದರು. ಗರುಡ, ಕಾಳಿಂಗಮರ್ದನ, ಷೇಕ್ಸ್‌ಪಿಯರ್‌... ಇವು ಅಲ್ಲಿ ರೂಪುತೆಳೆದ ಕಲಾಕೃತಿಗಳ ಉಲ್ಲೇಖಗಳಷ್ಟೆ.

ಹೀಗೆ ರೂಪಿಸಿದ ಕಲಾಕೃತಿಗಳನ್ನು ಸ್ಪರ್ಧೆಗೆ ಸಲ್ಲಿಸಲೂ ಮೇಳವು ಅವಕಾಶ ಒದಗಿಸಿತ್ತು. ಕಲಾವಿದರು ಮಾತ್ರವಲ್ಲ, ಶಾಲಾ–ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ನೋಂದಾಯಿಸಿಕೊಂಡು ಈ ಸಾಧ್ಯತೆಗಳನ್ನು ಪರಿಶೀಲಿಸಬಹುದಾಗಿತ್ತು ಮತ್ತು ಅನುಭವಿಸಬಹುದಾಗಿತ್ತು. ಮೇಳದ ವೇದಿಕೆಗಳಲ್ಲಿ ನಡೆಯುತ್ತಿದ್ದ ಸಂವಾದಗಳಿಗೆ ಕಿವಿಯಾದವರು ಕೆಲವರಾದರೆ, ಕಾರ್ಯಗಾರಗಳಲ್ಲಿ ಪ್ರಯೋಗಕ್ಕೆ ಒಡ್ಡಿಕೊಂಡವರು ಹಲವರು.

‘ಸ್ಕೆಚ್‌ ಅಲೇ’ ಭಾಗವಾಗಿ ರೂಪಿಸಲಾಗಿದ್ದ ವೇದಿಕೆ ಮೇಲೆ ರೂಪದರ್ಶಿಯೊಬ್ಬರು ಹಾಜರಾಗಿ, ವಿವಿಧ ಭಂಗಿಗಳನ್ನು ತೋರುತ್ತಾ ಹೋದರು. ವೇದಿಕೆ ಸುತ್ತುವರೆದಿದ್ದ ಕಲಾವಿದರು ಆ ಭಂಗಿಗಳನ್ನು ಕಾಗದದ ಮೇಲೆ ಮೂಡಿಸುತ್ತಾ ಹೋದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಹಲವು ರೂಪದರ್ಶಿಗಳು ವೇದಿಕೆಯನ್ನು ಕಂಗೊಳಿಸಿ ಹೋದರೆ, ಕಲಾವಿದರ ಕಾಗದದ ಮೇಲೆ ಹತ್ತಾರು ಕೃತಿಗಳು ಜೀವತಳೆದವು. 

ಮೇಳದಲ್ಲಿ ಅಳವಡಿಸಲಾಗಿದ್ದ ಅತಿವೇಗದ–ಅತ್ಯಾಧುನಿಕ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಡಿಜಿಟಲ್‌ ಗೇಮ್‌ಗಳನ್ನು ರೂಪಿಸುವ ಕೆಲಸವನ್ನು ತಂತ್ರಜ್ಞರು ಮಾಡಿದರು. ಗೇಮಿಂಗ್‌ ಆಸಕ್ತರು, ಕಲಾವಿದರು ಹೇಳಿದ ವಿವರಣೆ–ಕಲ್ಪನೆಗಳನ್ನು ಗೇಮ್‌ಗೆ ಇಳಿಸುವ ಹೊಣೆ ತಂತ್ರಜ್ಞರದ್ದು. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶಗಳನ್ನು ಬಳಸಿಕೊಂಡು ಸಾಮಾನ್ಯರೇ ಗೇಮಿಂಗ್‌ ಕೋಡ್‌ ಬರೆಯುವ ಪ್ರಯೋಗ ನಡೆಯಿತು. ಅದರ ಆಧಾರದಲ್ಲಿ ರೂಪುಗೊಂಡ ಗೇಮ್‌ಗಳನ್ನು ಪರದೆ ಮೇಲೆ ಪ್ರದರ್ಶಿಸಲಾಯಿತು.

ಮೇಳದ ಮೂರನೆ ಮತ್ತು ಕೊನೆಯ ದಿನವಾದ ಶನಿವಾರವೂ ಇಂತಹ ಹಲವು ಪ್ರಯೋಗ, ಕಾರ್ಯಾಗಾರಗಳು ನಡೆಯಲಿವೆ. ದೇಶದ ಬೇರೆಡೆಗಳಿಂದ ಬಂದ ಕಲಾವಿದರು ತಮ್ಮ ಆ್ಯನಿಮೇಟೆಡ್‌ ಕಿರುಚಿತ್ರಗಳು, 3ಡಿ ವಿಡಿಯೊಗಳು, ಡಿಜಿಟಲ್‌ ಗೇಮ್‌ಗಳನ್ನು ಪ್ರದರ್ಶಿಸಲಿದ್ದಾರೆ. ಈ ಎಲ್ಲ ವಿಭಾಗಗಳಲ್ಲಿ ಸ್ಪರ್ಧಿಸಿದವರಲ್ಲಿ ಗೆದ್ದವರ ಹೆಸರು ಘೋಷಿಸುವ ಕಾರ್ಯಕ್ರಮವೂ ನಡೆಯಲಿದೆ.

ರೂಪದರ್ಶಿಯ ಭಂಗಿಯನ್ನು ಕಾಗದಕ್ಕೆ ಇಳಿಸುವಲ್ಲಿ ಮಗ್ನರಾಗಿದ್ದ ಕಲಾವಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.