ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯ ರೈಲ್ವೆ ಮೇಲ್ಸೇತುವೆ, ರೈಲ್ವೆ ಕೆಳಸೇತುವೆ ನಿರ್ಮಾಣದ ಮೇಲ್ವಿಚಾರಣೆಗೆ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನೈರುತ್ಯ ರೈಲ್ವೆ, ಬಿಬಿಎಂಪಿ, ಬಿಡಿಎ, ಜಲಮಂಡಳಿ, ಕೆ–ರೈಡ್ ಮತ್ತು ಬೆಸ್ಕಾಂ ಅಧಿಕಾರಿಗಳ ಜತೆಗೆ ಸೋಮಣ್ಣ ಶುಕ್ರವಾರ ಸಭೆ ನಡೆಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆ ಬಂದಾಗಲೆಲ್ಲಾ ರೈಲ್ವೆ ಮೇಲ್ಸೇತುವೆ, ರೈಲ್ವೆ ಕೆಳಸೇತುವೆ ಬಳಿ ನೀರು ನಿಂತು ದೊಡ್ಡ ರಾದ್ಧಾಂತವಾಗುತ್ತದೆ. ರೈಲ್ವೆ, ಬಿಬಿಎಂಪಿ, ಬಿಡಿಎ, ಕೆ–ರೈಡ್ ಅಧಿಕಾರಿಗಳು ಪರಸ್ಪರರ ಮೇಲೆ ಹೊಣೆ ಹೊರಿಸುತ್ತಾರೆ. ಆದರೆ, ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಸಮನ್ವಯ ಸಮಿತಿ ರಚಿಸಲಾಗಿದೆ’ ಎಂದರು.
‘ನಗರ ವ್ಯಾಪ್ತಿಯ 14 ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ಕುಂಟುತ್ತಿದೆ. ಅವುಗಳನ್ನು 2026ರ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದೇನೆ. ಸಮನ್ವಯ ಸಮಿತಿಯು ಅದರ ಮೇಲ್ವಿಚಾರಣೆ ನಡೆಸಲಿದೆ. ಕೆಲವು ಕಾಮಗಾರಿಗಳಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ ಹಣವನ್ನು ಒದಗಿಸಿಲ್ಲ. ಅಂತಹ ಕಾಮಗಾರಿಗಳನ್ನು ಮುಂದುವರೆಸುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ’ ಎಂದರು.
ಉಪನಗರ ರೈಲು ವಿಳಂಬ ಸಾಧ್ಯತೆ:
‘ಮೊದಲನೇ ಮತ್ತು ಎರಡನೇ ಹಂತದ ಉಪನಗರ ರೈಲು ಯೋಜನೆ ಕಾಮಗಾರಿಗಳು ತೀರಾ ವಿಳಂಬವಾಗಿವೆ. ರಾಜ್ಯ ಸರ್ಕಾರದ ಈಗಿನ ಆಸಕ್ತಿಯನ್ನು ಪರಿಗಣಿಸಿದರೆ, ಈ ಯೋಜನೆಗಳು ಇನ್ನಷ್ಟು ವಿಳಂಬವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ’ ಎಂದು ಸೋಮಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಉಪನಗರ ರೈಲು ಯೋಜನೆಗಳಿಗೆ ರಾಜ್ಯ ಸರ್ಕಾರವು ಶೇ 51ರಷ್ಟು ವೆಚ್ಚ ಭರಿಸಿದರೆ, ಕೇಂದ್ರವು ಶೇ 49ರಷ್ಟು ವೆಚ್ಚ ಒದಗಿಸಲಿದೆ. ಆದರೆ, ರಾಜ್ಯ ಸರ್ಕಾರವು ಅನುದಾನ ಒದಗಿಸುತ್ತಿಲ್ಲ. ಅಗತ್ಯವಿರುವ ಹಣವನ್ನು ಕೇಂದ್ರದಿಂದಲೇ ಭರಿಸಬೇಕೆ ಅಥವಾ ರಾಜ್ಯ ಸರ್ಕಾರಕ್ಕೆ ಅನ್ಯರೂಪದಲ್ಲಿ ನೆರವು ಒದಗಿಸಬೇಕೆ ಎಂಬುದನ್ನು ಪರಿಶೀಲಿಸಿ, 15–20 ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇವೆ’ ಎಂದರು.
‘ಯಲಹಂಕ ರೈಲು ಗಾಲಿ ಕಾರ್ಖಾನೆಯ ವಾರ್ಷಿಕ ತಯಾರಿಕಾ ಸಾಮರ್ಥ್ಯವನ್ನು 1.12 ಲಕ್ಷ ಆ್ಯಕ್ಸೆಲ್‌ಗಳಿಗೆ ಹೆಚ್ಚಿಸಲಾಗುತ್ತದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಟರ್ಮಿನಲ್ ಅನ್ನು ₹1,378 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗುತ್ತದೆ. ದೇವನಹಳ್ಳಿಯಲ್ಲಿ ರೈಲು ಟರ್ಮಿನಲ್ ನಿರ್ಮಿಸಲಾಗುತ್ತದೆ’ ಎಂದು ಪುನರುಚ್ಚರಿಸಿದರು.
ಶ್ರೀನಿವಾಸಪುರದಲ್ಲಿ ರೈಲ್ವೆ ಇಲಾಖೆಯ ಜಾಗವೇ ಇಲ್ಲ. ರಾಜ್ಯ ಸರ್ಕಾರವೂ ಜಮೀನು ಒದಗಿಸಿಲ್ಲ. ಹೀಗಿರುವಾಗ ಅಲ್ಲಿ ರೈಲು ಬೋಗಿ ಕಾರ್ಖಾನೆ ನಿರ್ಮಾಣದ ಪ್ರಶ್ನೆಯೇ ಬರುವುದಿಲ್ಲವಿ.ಸೋಮಣ್ಣ ರೈಲ್ವೆ ರಾಜ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.