ADVERTISEMENT

ರೌಡಿಗಳಿಗೆ ಬಿಜೆಪಿ ರಾಜಮರ್ಯಾದೆ, ಭೂಗತಲೋಕ ಮತ್ತೆ ಸಕ್ರಿಯವಾಗಿದೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2022, 6:53 IST
Last Updated 9 ಡಿಸೆಂಬರ್ 2022, 6:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ರೌಡಿಗಳಿಗೆ ಬಿಜೆಪಿ ರಾಜಮರ್ಯಾದೆ ನೀಡುತ್ತಿರುವುದರಿಂದ ಭೂಗತಲೋಕ ಮತ್ತೆ ಸಕ್ರಿಯವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದ ರೌಡಿ ಶಿವಶಂಕರ್ ರೆಡ್ಡಿ ಮೇಲಿನ ಗುಂಡಿನ ದಾಳಿ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

‘ಬಿಜೆಪಿ ರೌಡಿಗಳಿಗೆ ರಾಜಮರ್ಯಾದೆ ಕೊಡುತ್ತಿರುವಾಗ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬಿಲ್ಡರ್ ಮೇಲೆ ಗುಂಡಿನ ದಾಳಿಯಾಗಿದೆ. ಸರ್ಕಾರದ ಬೆಂಬಲವಿದೆ ಎಂದು ತಿಳಿದಿದ್ದೇ ತಡ ಭೂಗತಲೋಕ ಮತ್ತೆ ಆ್ಯಕ್ಟಿವ್ ಆಗಿದೆ. ಆರಗ ಜ್ಞಾನೇಂದ್ರ ಅವರೇ, ಭೂಗತಲೋಕಕ್ಕೆ ಧೈರ್ಯ ಬಂದಿದ್ದು, ನಿಮ್ಮಿಂದಲೇ ಅಲ್ಲವೇ? ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿಯಲ್ಲವೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ADVERTISEMENT

‘ಬಿಜೆಪಿ ರೌಡಿಗಳಿಗೆ ಮಣೆ ಹಾಕುತ್ತಿರುವುದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದೆ. ಇದಕ್ಕೆ ಬೆಂಗಳೂರಿನ ಶೂಟೌಟ್ ಘಟನೆಯೇ ಸಾಕ್ಷಿ. ಬಿಜೆಪಿಯಲ್ಲಿ ಸ್ಥಾನ ಪಡೆದುಕೊಳ್ಳಲು ರೌಡಿಗಳು ತಮ್ಮ ಕ್ರೈಮ್ ಸ್ಕೋರ್‌ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಬಿಜೆಪಿಯ ರೌಡಿ ಮೋರ್ಚಾಗೆ ಕ್ರೈಮ್ ಸ್ಕೋರ್‌ ಮುಖ್ಯ ಅಲ್ಲವೇ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ರಾಜಕೀಯ ನಾಯಕರು ರೌಡಿ ಶೀಟರ್‌ಗಳೊಂದಿಗೆ ಕಾಣಿಸಿಕೊಂಡಿರುವ ವಿಚಾರ ಕಾಂಗ್ರೆಸ್‌ –ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಸೈಲೆಂಟ್ ಸುನಿಲ್, ಫೈಟರ್ ರವಿ ಹಾಗೂ ಬೆತ್ತನಗೆರೆ ಶಂಕರ ಬಿಜೆಪಿ ಸೇರ್ಪಡೆ ವಿಚಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು. ಕಾಂಗ್ರೆಸ್‌ ನಾಯಕರ ಹೇಳಿಕೆಗಳಿಗೆ ಬಿಜೆಪಿ ತಿರುಗೇಟು ನೀಡುವ ಪ್ರಯತ್ನ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.