ಕಾಲ್ತುಳಿತ ಸಂಭವಿಸಿದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ವೊಂದರ ಬಳಿ ಬಿದ್ದಿರುವ ಪಾದರಕ್ಷೆಯ ರಾಶಿ
– ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್
ಬೆಂಗಳೂರು: ಮೂರು ಕಡೆ ಏಕಕಾಲದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಭದ್ರತೆ ಹಾಗೂ ಜನದಟ್ಟಣೆ ನಿಯಂತ್ರಣ ಕಷ್ಟ ಎಂದು ಪೊಲೀಸರ ಎಚ್ಚರಿಕೆಯ ಮಾತುಗಳನ್ನು ಪಕ್ಕಕ್ಕಿಟ್ಟು, ಹಟಕ್ಕೆ ಬಿದ್ದು ಸಮಾರಂಭ ನಡೆಸಿದ್ದೇ ಬುಧವಾರದ ‘ಮಹಾದುರಂತ’ಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರಿಗೆ ಸನ್ಮಾನ, ವಿಧಾನಸೌಧದಿಂದ ಕ್ರೀಡಾಂಗಣದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಹಾಗೂ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಸುವುದಾಗಿ ಬುಧವಾರ 9 ಗಂಟೆಯ ಸುಮಾರಿಗೆ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ತರಾತುರಿಯಲ್ಲಿ ಕಾರ್ಯಕ್ರಮ ನಡೆಸಿದರೆ ಭದ್ರತೆ ಒದಗಿಸುವುದು ಕಷ್ಟ ಎಂದು ರಾಜ್ಯ ಸರ್ಕಾರ, ಆರ್‌ಸಿಬಿ ಫ್ರಾಂಚೈಸಿ, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆ (ಈವೆಂಟ್ ಮ್ಯಾನೇಜ್‌ಮೆಂಟ್) ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪೊಲೀಸರು ಸ್ಪಷ್ಟವಾಗಿ ತಿಳಿಸಿದ್ದರು. ಆದರೆ, ಹಟಕ್ಕೆ ಬಿದ್ದು ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ದುರ್ಘಟನೆಗೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಫೈನಲ್ ಪಂದ್ಯ ವೀಕ್ಷಣೆಗೆ ಮಂಗಳವಾರ ರಾತ್ರಿ ನಗರದ ಪಬ್, ಮಾಲ್ ಹಾಗೂ ಮೈದಾನಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೂ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆದ್ದ ಕಾರಣ ಬುಧವಾರ ನಸುಕಿನವರೆಗೂ ನಗರದ ಹಲವೆಡೆ ಸಂಭ್ರಮಾಚರಣೆಗಳು ನಡೆದಿದ್ದವು. ನಸುಕಿನವರೆಗೂ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸುವುದು, ಆತುರದಲ್ಲಿ ಬೇರೆ ಜಿಲ್ಲೆಗಳಿಂದ ಸಿಬ್ಬಂದಿ ಕರೆಸುವುದು, ಬ್ಯಾರಿಕೇಡ್ ಅಳವಡಿಕೆ, ಸಂಚಾರ ಮಾರ್ಗ ಬದಲಾವಣೆ ಕಷ್ಟವಾಗಲಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದರು’ ಎಂದು ಗೊತ್ತಾಗಿದೆ.
‘ಪೊಲೀಸರ ಮನವಿ ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆಯನ್ನು ಕೈಬಿಟ್ಟು ವಿಧಾನಸೌಧ ಹಾಗೂ ಕ್ರೀಡಾಂಗಣದಲ್ಲಿ ಸಮಾರಂಭ ನಡೆಸಲು ತೀರ್ಮಾನಿಸಲಾಗಿತ್ತು. ಅಷ್ಟರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ತನ್ನ ವೆಬ್‌ಸೈಟ್‌ನಲ್ಲಿ ಕ್ರೀಡಾಂಗಣ ಪ್ರವೇಶ ಉಚಿತ ಎಂಬ ಪ್ರಕಟಣೆ ಹೊರಡಿಸಿತ್ತು. ಇದರಿಂದ ನಗರದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಅಭಿಮಾನಿಗಳು ಕ್ರೀಡಾಂಗಣದತ್ತ ಬಂದಿದ್ದರು. ಭದ್ರತಾ ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಕ್ರೀಡಾಂಗಣ ಹಾಗೂ ಕಾಲ್ತುಳಿತ ನಡೆದ ಸ್ಥಳಗಳಿಗೆ ಗೃಹ ಸಚಿವ ಜಿ.ಪರಮೇಶ್ವರ, ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ವಿಚಾರಣಾಧಿಕಾರಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಪದಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಎಂಟು ಗೇಟ್‌ಗಳಲ್ಲಿ ಕಾಲ್ತುಳಿತ: ಗೇಟ್ ನಂಬರ್ 6, 7, 2, 2ಎ, 17, 18, 21, 16ನೇ ಗೇಟ್‌ಗಳಲ್ಲಿ ಕಾಲ್ತುಳಿತ ಸಂಭವಿಸಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಈ ಎಂಟು ಗೇಟ್‌ಗಳ ಬಳಿ ಹೆಚ್ಚಿನ ಜನರು ಜಮಾಯಿಸಿದ್ದರು. ಸಂಜೆ ನಾಲ್ಕು ಗಂಟೆಯವರೆಗೂ ಯಾವುದೇ ಗೇಟ್ ತೆರೆದಿರಲಿಲ್ಲ. ನಂತರ, ಮೂರು ಗೇಟ್‌ಗಳನ್ನು ತೆರೆಯಲಾಯಿತು. ಎಲ್ಲಾ 21 ಗೇಟ್‌ಗಳನ್ನು ತೆರೆದು ಪ್ರವೇಶ ಕಲ್ಪಿಸುವಂತೆ ಅಭಿಮಾನಿಗಳು ಮಾಡಿದ ಮನವಿಯನ್ನು ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಪರಿಗಣಿಸಲಿಲ್ಲ.
ಆಧಾರ್ ಕಾರ್ಡ್ ಪರಿಶೀಲಿಸಿ ಉಚಿತ ಟಿಕೆಟ್ ನೀಡುವುದು ತಡವಾಗಿದ್ದರಿಂದ ಜನರು ಗೇಟ್ ಒದ್ದು ನುಗ್ಗಲು ಯತ್ನಿಸಿದರು. ಇನ್ನೂ ಕೆಲವರು ಕಾಂಪೌಂಡ್ ಹತ್ತಿದರು. ಆಗ ನೂಕುನುಗ್ಗಲು ಸಂಭವಿಸಿ ಕೆಲವರು ನೆಲಕ್ಕೆ ಬಿದ್ದರು. ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ್ದರಿಂದ ಬಿದ್ದವರನ್ನೇ ತುಳಿದುಕೊಂಡು ದಿಕ್ಕಾಪಾಲಾಗಿ ಓಡಿದ್ದರಿಂದ ಸಾವು ಸಂಭವಿಸಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮೃತರ ಹೆಸರು ವಿಳಾಸ
1. ಬಿ.ಎಸ್.ದಿವ್ಯಾಂಶಿ(14) ಕಟ್ಟಿಗೇನಹಳ್ಳಿ ರೇವಾ ವಿ.ವಿ ಕಾಲೇಜು ರಸ್ತೆ ಯಲಹಂಕ ಬೆಂಗಳೂರು
2. ಅಕ್ಷತಾ ಪೈ(26) ನಂ: 611 ರವೀಂದ್ರ ನಗರ ಉತ್ತರ ಕನ್ನಡ ಜಿಲ್ಲೆ
3. ಭೂಮಿಕ್(19) ಕುಪ್ಪಗೋಡು ಬೇಲೂರು ತಾಲ್ಲೂಕು ಹಾಸನ ಜಿಲ್ಲೆ (ವಾಸ: ಎಂ.ಎಸ್.ರಾಮಯ್ಯ ಬಡಾವಣೆ ಬೆಂಗಳೂರು)
4. ಸಹನಾ(23) ಎಸ್.ವಿ.ಬಡಾವಣೆ ಕೋಲಾರ ಜಿಲ್ಲೆ
5. ಚಿನ್ಮಯಿ ಶೆಟ್ಟಿ (19) ಎರಡನೇ ಕ್ರಾಸ್ ಎರಡನೇ ಮುಖ್ಯರಸ್ತೆ ನಾರಾಯಣ ನಗರ ದೊಡ್ಡಕಲ್ಲಸಂದ್ರ ಬೆಂಗಳೂರು
6. ಮನೋಜ್ ಕುಮಾರ್(20) ನಾಗಸಂದ್ರ ಗ್ರಾಮ ಯಡಿಯೂರು ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ
7. ಕೆ.ಟಿ.ಶ್ರವಣ್(20) ಕುರಟಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ
8. ಶಿವು(17) ಹೊನಿಗೇರಿ ಗ್ರಾಮ ಯಾದಗಿರಿ ಜಿಲ್ಲೆ
9. ಪೂರ್ಣಚಂದ್ರ(20) ರಾಯಸಮುದ್ರ ಕೆಆರ್ ಪೇಟೆ ತಾಲ್ಲೂಕು ಮಂಡ್ಯ ಜಿಲ್ಲೆ
10. ಕಾಮಾಕ್ಷಿದೇವಿ (29) ಉಡುಮಲ ಪೇಟ್ ಕೊಯಮತ್ತೂರು ತಮಿಳುನಾಡು
11. ಪ್ರಜ್ವಲ್ ಚಿಕ್ಕಬೊಮ್ಮಸಂದ್ರ ಕ್ರಾಸ್ ಡೇರಿ ವೃತ್ತ ಯಲಹಂಕ ಟೌನ್ ಬೆಂಗಳೂರು
ವಿಧಾನಸೌಧದ ಎದುರು ಒಂದು ಲಕ್ಷ ಜನ ಸೇರುತ್ತಾರೆ ಎಂದು ಅಂದಾಜಿಸಲಾಗಿತ್ತು. ಕ್ರೀಡಾಂಗಣದಲ್ಲಿ 40 ಸಾವಿರ ಮತ್ತು ಕ್ರೀಡಾಂಗಣದ ಹೊರಗಡೆ 2.50 ಲಕ್ಷ ಜನ ಸೇರಿದ್ದರು. ಇಷ್ಟೊಂದು ಜನ ಒಂದೇ ಕಡೆ ಸೇರಿದ್ದರಿಂದ ದುರಂತ ಆಗಿದೆ-ಜಿ.ಪರಮೇಶ್ವರ, ಗೃಹ ಸಚಿವ
ಆರ್‌ಸಿಬಿ ಡಿಎನ್‌ಎ ಕೆಎಸ್‌ಸಿಎ ವಿರುದ್ಧ ಎಫ್‌ಐಆರ್
ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು 64 ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಫ್ರಾಂಚೈಸಿ (ಎ–1) ಡಿಎನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ (ಈವೆಂಟ್ ಮ್ಯಾನೇಜ್‌ಮೆಂಟ್) (ಎ–2) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಎ–3) ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.
ಬಿಎನ್‌ಎಸ್ ಸೆಕ್ಷನ್‌ಗಳಾದ 105 115(2) 118(1) 118(2) 3(5) 190 132 125(ಎ) 125 (ಬಿ) ಅಡಿ ಪ್ರಕರಣ ದಾಖಲಾಗಿದೆ. ಅದಕ್ಕೂ ಮುನ್ನ ಯಾರನ್ನೂ ಹೊಣೆ ಮಾಡದೇ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದರು. ಮೃತ ಕುಟುಂಬಸ್ಥರಿಂದ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಎಫ್‌ಐಆರ್ ದಾಖಲಾಗಿದೆ.
ದುರಂತಕ್ಕೆ ಕಾರಣರಾದವರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು. ಯುಡಿಆರ್ ದಾಖಲಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ತಂತ್ರ ಮಾಡಲಾಗಿದೆ ಎಂದು ಸಂಬಂಧಿಕರು ದೂರಿದ್ದರು. ಕಾಲ್ತುಳಿತ ಘಟನೆ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಸಮಾರಂಭದ ಆಯೋಜಕರಾಗಿದ್ದ ಆರ್‌ಸಿಬಿ ಫ್ರಾಂಚೈಸಿ ವಿಜಯೋತ್ಸವದ ವೇಳೆ ಕ್ರೀಡಾಂಗಣದ ಭದ್ರತೆ ಹೊಣೆ ಹೊತ್ತಿದ್ದ ಡಿಎನ್‌ಎ ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ದುರಂತದ ವಿಚಾರಣಾಧಿಕಾರಿ ಆಗಿರುವ ಬೆಂಗಳೂರು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
‘ಮೆರವಣಿಗೆಗೆ ಅವಕಾಶ ನೀಡಲು ಅಸಾಧ್ಯ ಎಂದಿದ್ದ ಪೊಲೀಸರು’
ಬೆಂಗಳೂರು: ‘ಮೆರವಣಿಗೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಕನಕಪುರದಲ್ಲಿದ್ದ ನಾನು ತಕ್ಷಣವೇ ಬೆಂಗಳೂರಿಗೆ ಧಾವಿಸಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು ‘ಆರ್‌ಸಿಬಿ ತಂಡ ಬೆಂಗಳೂರಿಗೆ ಬರುತ್ತಿರುವುದಾಗಿ ತಂಡದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ನಮ್ಮ ಸರ್ಕಾರದ ಮುಂದೆ ಬೇರೆ ಆಯ್ಕೆ ಇರಲಿಲ್ಲ. ಸಂಭ್ರಮಾಚರಣೆಗೆ ಜನ ಬರುವುದನ್ನು ತಡೆಯಲು ಮೆಟ್ರೊ ಸಂಚಾರವನ್ನೇ ಸ್ಥಗಿತಗೊಳಿಸಲಾಗಿತ್ತು’ ಎಂದರು.
‘ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕೆಎಸ್‌ಸಿಎ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹೋಗಲು ಸಾಧ್ಯವಾಗದ ಕಾರಣ ನನ್ನ ಕಾರಿನಲ್ಲೇ ಕರೆದುಕೊಂಡು ಹೋಗಬೇಕಾಯಿತು. ಕ್ರೀಡಾಂಗಣಕ್ಕೆ ಹೋಗುತ್ತಿದ್ದಾಗ ಕಾಲ್ತುಳಿತ ನಡೆದಿದೆ ಎಂದು ಮಾಧ್ಯಮ ಸ್ನೇಹಿತರು ಮಾಹಿತಿ ನೀಡಿದರು. ಆ ಬಳಿಕ ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು’ ಎಂದರು.
ಕಾರ್ಯಕ್ರಮ ನಡೆಸಲು ಸರ್ಕಾರದ ಮೇಲೆ ಒತ್ತಡವಿತ್ತು: ಯತೀಂದ್ರ
ಮೈಸೂರು: ಆರ್‌ಸಿಬಿ ತಂಡದ ಸನ್ಮಾನ ಸಮಾರಂಭದ ವೇಳೆ ತಪ್ಪುಗಳು ಆಗಿರುವುದು ಸತ್ಯ. ಸರ್ಕಾರವೂ ಅದನ್ನು ಒಪ್ಪಿಕೊಂಡಿದೆ. ಕಾರ್ಯಕ್ರಮ ನಡೆಸಲು ಸರ್ಕಾರದ ಮೇಲೆ ಒತ್ತಡವಿತ್ತು’ ಎಂದು ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ‘ನಿರೀಕ್ಷೆಗಿಂತ ಅತಿ ಹೆಚ್ಚು ಜನ ಬಂದಿದ್ದರಿಂದ ಘಟನೆ ನಡೆದಿದ್ದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ತಪ್ಪಿಲ್ಲ ’ ಎಂದರು.
‘ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಜನ ಬರಲೇ ಇಲ್ಲ. ಸಚಿವರು ಅವರ ಸಂಬಂಧಿಕರು ಹಾಗೂ ಕುಟುಂಬದವರು ಬಂದಿರಬಹುದು. ಜನ ಕ್ರಿಕೆಟಿಗರನ್ನು ನೋಡಲು ಸ್ಟೇಡಿಯಂಗೆ ಹೋದರು. ಅಲ್ಲಿ ಸಮಸ್ಯೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.