ADVERTISEMENT

ಕಾಲ್ತುಳಿತ ಪ್ರಕರಣ | ಗೋವಿಂದರಾಜು ವಿಕೆಟ್‌ ಪತನ: ನಿಂಬಾಳ್ಕರ್ ಎತ್ತಂಗಡಿ

ಸಂಭಾವ್ಯ ಅನಾಹುತದ ಎಚ್ಚರಿಕೆ ನೀಡಲು ಗುಪ್ತಚರ ವೈಫಲ್ಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 10:08 IST
Last Updated 6 ಜೂನ್ 2025, 10:08 IST
<div class="paragraphs"><p>ಗೋವಿಂದರಾಜು,&nbsp;ಹೇಮಂತ್ ನಿಂಬಾಳ್ಕರ್</p></div>

ಗೋವಿಂದರಾಜು, ಹೇಮಂತ್ ನಿಂಬಾಳ್ಕರ್

   

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಕ್ರಮದ ಬೆನ್ನಲ್ಲೇ, ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರನ್ನು ‘ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ’ ಹುದ್ದೆ ಯಿಂದ ತೆಗೆದು ಹಾಕಲಾಗಿದೆ.

ದುರಂತಕ್ಕೆ ಸರ್ಕಾರದ ವೈಫಲ್ಯ ಕಾರಣ ಎಂಬ ಗಂಭೀರ ಆರೋಪ ಎದುರಾಗಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಅನಾಹುತಕ್ಕೆ ಹೊಣೆಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವನ್ನು ಹಲವು ಸಚಿವರು ಮಾಡಿದ್ದರು. ಹೀಗಾಗಿ, ಸಚಿವ ಸಂಪುಟ ಸಭೆ ಮುಗಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರು, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದರು. ಸ್ವತಃ ಸುದ್ದಿಗೋಷ್ಠಿ ನಡೆಸಿದ್ದ ಅವರು, ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ, ಲೋಪ ಎಸಗಿದ್ದಾರೆ ಎಂಬ ಆರೋಪ ಹೊತ್ತಿರುವ ಐಪಿಎಸ್‌ ಅಧಿಕಾರಿಗಳಾದ ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಕಮಿಷನರ್‌ ವಿಕಾಸ್‌ ಕುಮಾರ್ ವಿಕಾಸ್‌, ಕೇಂದ್ರ ವಿಭಾಗದ ಡಿಸಿಪಿ ಎಚ್‌.ಟಿ.ಶೇಖರ್, ಕಬ್ಬನ್‌ ಪಾರ್ಕ್‌ ಎಸಿಪಿ ಸಿ.ಬಾಲಕೃಷ್ಣ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್‌ ಎ.ಕೆ.ಗಿರೀಶ್‌ ಅವರನ್ನು ಗುರುವಾರ ರಾತ್ರಿ ಅಮಾನತು ಮಾಡಲಾಗಿತ್ತು.

ಈ ಬೆಳವಣಿಗೆಗಳ ಭಾಗವಾಗಿಯೇ, ಸಿದ್ದರಾಮಯ್ಯ ಅವರು ತಮ್ಮ ಆಪ್ತ ಗೋವಿಂದರಾಜು ವಿರುದ್ಧವೂ ಕ್ರಮ
ತೆಗೆದುಕೊಂಡಿದ್ದಾರೆ. 

‘ಕರ್ನಾಟಕ ಒಲಿಂಪಿಕ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿರುವ ಗೋವಿಂದರಾಜು ಅವರೇ  ದುರಂತಕ್ಕೆ ಕಾರಣರಾಗಿದ್ದು, ಅವರನ್ನು ಕೆಳಗಿಳಿಸಬೇಕು ಮತ್ತು ಅವರನ್ನು ದೂರ ಇಡಬೇಕು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಚಿವರಿಂದ ಪ್ರಬಲ ಒತ್ತಡ ಬಂದ ಕಾರಣ ಮುಖ್ಯಮಂತ್ರಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ವಿಧಾನಸೌಧದ ಮೆಟ್ಟಿಲುಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಮತ್ತು ಜನ ಸೇರಿಸಬೇಕು ಎಂಬ ಸಲಹೆ ಕೊಟ್ಟವರೇ ಗೋವಿಂದರಾಜು. ಇದು ದುರಂತಕ್ಕೆ ಕಾರಣವಾಗಿದೆ. ಇಷ್ಟೆಲ್ಲ ಆದ ಬಳಿಕವೂ ಅವರು, ಸಂಪುಟ ಸಭೆ ಬಳಿಕ ನಡೆದ ವಿಶೇಷ ಸಭೆಗೆ ಬಂದಿದ್ದಾರೆ. ಅವರನ್ನು ಹೊರಗೆ ಕಳಿಸಿ ಎಂದು ಕೆಲವು ಸಚಿವರು ತರಾಟೆಗೆ ತೆಗೆದುಕೊಂಡರು. ಬಳಿಕ ಗೋವಿಂದರಾಜು ಅವರು ಸಭೆಯಿಂದ ಹೊರ ನಡೆದಿದ್ದರು’ ಎಂದು ಮೂಲಗಳು ಹೇಳಿವೆ.

ಸಚಿವರ ಅಸಮಾಧಾನವನ್ನು ಗಂಭೀರವಾಗಿ ತೆಗೆದುಕೊಂಡ ಸಿದ್ದರಾಮಯ್ಯ ಅವರು, ಗೋವಿಂದ ರಾಜು ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡುವ ತೀರ್ಮಾನ ತೆಗೆದುಕೊಂಡರು ಎಂದು ಗೊತ್ತಾಗಿದೆ. 

ಈ ಮಧ್ಯೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ‘11 ಜನರ ಸಾವಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರೇ ಕಾರಣ. ಎರಡು–ಮೂರು ಕಡೆ ವಿಜಯೋತ್ಸವ ಮಾಡಲು ಸಾಧ್ಯವಿಲ್ಲ. ಭದ್ರತೆ ಕೊಡುವುದು ಕಷ್ಟ ಆಗುತ್ತದೆ ಎಂದು ಪೊಲೀಸರು ಪರಿಪರಿಯಾಗಿ ಹೇಳಿದರೂ ಕೇಳದೇ ವಿಜಯೋತ್ಸವ ಆಗಲೇಬೇಕು ಎಂದು ಗೋವಿಂದರಾಜು ಪಟ್ಟು ಹಿಡಿದರು. ಪೊಲೀಸರಿಗೆ ಧಮ್ಕಿಯನ್ನೂ ಹಾಕಿದರು. ಇದರಿಂದ ದುರಂತ ಸಂಭವಿಸಿದೆ’ ಎಂದು ದೂರಿದ್ದರು.

ನಿಂಬಾಳ್ಕರ್‌ ಎತ್ತಂಗಡಿ: ಐಪಿಎಸ್ ಅಧಿಕಾರಿ ಹೇಮಂತ್‌ ಎಂ. ನಿಂಬಾಳ್ಕರ್ ಅವರನ್ನು ಗುಪ್ತಚರ ವಿಭಾಗದ ಎಡಿಜಿಪಿ ಹುದ್ದೆಯಿಂದ ಎತ್ತಂಗಡಿ ಮಾಡಲಾಗಿದ್ದು, ಆ ಹುದ್ದೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಸ್.ರವಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ನಿಂಬಾಳ್ಕರ್ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರ ಹುದ್ದೆಯಲ್ಲಿ ಮುಂದುವರಿಸಲಾಗಿದೆ.  ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಯೋಜಿಸಿದರೆ ಎದುರಾಗಬಹುದಾದ ಸಮಸ್ಯೆಗಳು, ಕೈಗೊಳ್ಳಬೇಕಾದ ಭದ್ರತಾ ಕ್ರಮಗಳು, ವಿಶೇಷ ಅತಿಥಿಗಳ ಭದ್ರತೆ ಕುರಿತು ಸರ್ಕಾರ ಹಾಗೂ ಗೃಹ ಇಲಾಖೆಗೆ ಮಾಹಿತಿ ನೀಡುವ ಹೊಣೆ ಗುಪ್ತಚರ ವಿಭಾಗದ್ದಾಗಿರುತ್ತದೆ. ಅದರಲ್ಲಿ, ನಿಂಬಾಳ್ಕರ್ ಎಡವಿದ್ದ ಕಾರಣಕ್ಕೆ ಅವರಿಂದ ಗುಪ್ತದಳ ವಿಭಾಗದ ಹೊಣೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ. 

‘ಗುಪ್ತದಳದ ವೈಫಲ್ಯದ ಕಾರಣದಿಂದಲೇ ಕಾಲ್ತುಳಿತ ಸಂಭವಿಸಿದ್ದು ಅವರನ್ನೂ ಅಮಾನತು ಮಾಡಬೇಕು’  ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು.

ವಿಜಯೋತ್ಸವದ ಖರ್ಚು ₹15 ಕೋಟಿ?

ಆರ್‌ಸಿಬಿ ‘ವಿಜಯೋತ್ಸವ’ ಕಾರ್ಯಕ್ರಮಕ್ಕಾಗಿ (ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ) ಸುಮಾರು ₹15 ಕೋಟಿಗೂ ಹೆಚ್ಚು ಖರ್ಚಾಗಿರುವುದಾಗಿ ಗೊತ್ತಾಗಿದೆ.

ಐಪಿಎಲ್‌ನ ಇವೆಂಟ್‌ ಮ್ಯಾನೇಜ್‌ಮೆಂಟ್‌ ಜವಾಬ್ದಾರಿ ಹೊತ್ತಿರುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಯೇ ವಿಜಯೋತ್ಸವ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿತ್ತು. ಈ ಕಂಪನಿ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಕ್ಕಳಿಗೆ ಸೇರಿದ್ದು, ಸರ್ಕಾರದಲ್ಲಿ ಪ್ರಭಾವ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯೋತ್ಸವವನ್ನು ಶನಿವಾರ ಹಮ್ಮಿಕೊಳ್ಳಬೇಕು ಎಂಬುದು ಆರಂಭದ ಯೋಜನೆಯಾಗಿತ್ತು. ಆದರೆ, ಪ್ರಮುಖ ಸಚಿವರೊಬ್ಬರ ಒತ್ತಡದ ಕಾರಣ ತರಾತುರಿಯಲ್ಲಿ ಬುಧವಾರವೇ ನಿಗದಿ ಮಾಡಲಾಯಿತು. ಹೀಗಾಗಿ ಕ್ರೀಡಾಂಗಣ ಮತ್ತು ವಿಧಾನಸೌಧದ ಬಳಿ ಸೇರಬಹುದಾದ ಜನಸಂಖ್ಯೆ ಮತ್ತು ಅದನ್ನು ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯೋಚಿಸುವಲ್ಲಿ ಡಿಎನ್‌ಎ ಸಂಸ್ಥೆಯೂ ಎಡವಿದೆ ಎಂದು ಮೂಲಗಳು ಹೇಳಿವೆ.

ವಿಜಯೋತ್ಸವಕ್ಕೆ ಅಧಿಕಾರಿಗಳ ಒತ್ತಡ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ವಿಜಯೋತ್ಸವ ನಡೆಸಲು ಸಚಿವರು ಮಾತ್ರವಲ್ಲದೇ ಮುಖ್ಯಕಾರ್ಯದರ್ಶಿಯಾದಿಯಾಗಿ ಹಲವು ಹಿರಿಯ ಅಧಿಕಾರಿಗಳೂ ಮುತುವರ್ಜಿ ವಹಿಸಿದ್ದರು. ಆರ್‌ಸಿಬಿ 18 ವರ್ಷಗಳಲ್ಲಿ ಮೊದಲ ಬಾರಿಗೆ ಗೆದ್ದಿರುವುದರಿಂದ ವಿಧಾನಸೌಧದ ಮುಂದೆ ವಿಜಯೋತ್ಸವ ಆಚರಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಅಲ್ಲದೇ, ಗಣ್ಯರಿಗೆ ಪಾಸ್‌ ನೀಡಬೇಕು ಎಂದೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌) ಅಧಿಕಾರಿಗಳಿಗೆ ಸೂಚಿಸಲಾಯಿತು. ಯಾರಿಗೆಲ್ಲ ಮತ್ತು ಎಷ್ಟು ಪಾಸ್‌ಗಳನ್ನು ನೀಡಬೇಕು ಎಂಬ ಮಾಹಿತಿ ಇಲ್ಲದೇ ಡಿಪಿಎಆರ್‌ ಅಧಿಕಾರಿಗಳ ಮೇಲೆ ವಿಪರೀತ ಒತ್ತಡ ಸೃಷ್ಟಿಯಾಯಿತು. ಸಚಿವರು ಮತ್ತು ಹಿರಿಯ ಅಧಿಕಾರಿಗಳ ಮಕ್ಕಳು ಮತ್ತು ಕುಟುಂಬದ ಸದಸ್ಯರಿಗಷ್ಟೇ ಪಾಸ್‌ ನೀಡುವ ವ್ಯವಸ್ಥೆ ಆಯಿತು. ವಿಧಾನಸೌಧ ಕಟ್ಟಡಕ್ಕೆ ಅಳವಡಿಸಿರುವ ವಿದ್ಯುತ್‌ ಅಲಂಕಾರದ ದೀಪ ಗಳನ್ನು ರಾತ್ರಿ ಬೆಳಗಿಸುವ ಆಲೋಚನೆ ಇತ್ತು. ಕೆಎಸ್‌ಸಿಎ ಆವರಣದಲ್ಲಿ ದುರಂತದ ವಿಚಾರ ಗೊತ್ತಾಗುತ್ತಿದ್ದಂತೆಯೇ ಅದನ್ನು ಕೈಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.