ಪೊಲೀಸ್
ಬೆಂಗಳೂರು: ‘ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಕರ್ತವ್ಯಲೋಪದಡಿ ಅಮಾನತುಗೊಂಡ ಅಧಿಕಾರಿಗಳು ಆರ್‌ಸಿಬಿಯ ಸೇವಕರಂತೆ ಕೆಲಸ ಮಾಡಿದ್ದಾರೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರುಹಿದೆ.
ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ರದ್ದುಪಡಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ‘ಸಿಎಟಿ ಆದೇಶದಲ್ಲಿ ದುರ್ಘಟನೆಗೆ ನಾವು ಕಾರಣ ಎಂಬ ಅಂಶಗಳನ್ನು ಅಳಿಸಿ ಹಾಕಬೇಕು’ ಎಂದು ಕೋರಿ ಆರ್‌ಸಿಬಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಪದಾಂಕಿತ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್ ಮತ್ತು ರೊಬೆನ್ ಜಾಕೊಬ್ ವಾದ ಮಂಡಿಸಿ, ‘ಪೊಲೀಸ್ ಅಧಿಕಾರಿಗಳ ನಡೆ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ಹಾಗಾಗಿಯೇ, ಅವರನ್ನು ಅಮಾನತು ಮಾಡಲಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿದರು.
ಇದನ್ನು ಆಕ್ಷೇಪಿಸಿದ ಪ್ರತಿವಾದಿ ವಿಕಾಸ್ ಕುಮಾರ್ ವಿಕಾಸ್ ಪರ ಪದಾಂಕಿತ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ‘ದುರ್ಘಟನೆಗೆ ಯಾರನ್ನಾದರೂ ಹೊಣೆ ಮಾಡಬೇಕಿತ್ತು. ಅದಕ್ಕಾಗಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ’ ಎಂದು ದೂರಿದರು.
ಆರ್‌ಸಿಬಿ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ, ‘ಪ್ರಕರಣದಲ್ಲಿ ಆರ್‌ಸಿಬಿ ಪಕ್ಷಕಾರ ಅಲ್ಲದೇ ಇದ್ದರೂ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದು ತನಿಖೆಯ ಮೇಲೆ ಪರಿಣಾಮ ಉಂಟು ಮಾಡಲಿದೆ. ಹೀಗಾಗಿ, ಆಕ್ಷೇಪಾರ್ಹ ಅಂಶಗಳನ್ನು ಅಳಿಸಿ ಹಾಕಬೇಕು’ ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ (ಜುಲೈ 18) ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.