ADVERTISEMENT

ಡಿಕೆಶಿ ಬಾಲಿಶತನದಿಂದ 11 ಮಂದಿ ಸಾವು: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 9:22 IST
Last Updated 6 ಜೂನ್ 2025, 9:22 IST
<div class="paragraphs"><p>ಬಿ. ಶ್ರೀರಾಮುಲು</p></div>

ಬಿ. ಶ್ರೀರಾಮುಲು

   

ಬಳ್ಳಾರಿ: ‘ಚಿನ್ನಸ್ವಾಮಿ ಕ್ರಿಕೆಟ್‌ ಮೈದಾನದ ಬಳಿ ನಡೆದ ದುರಂತಕ್ಕೆ ಡಿ.ಕೆ ಶಿವಕುಮಾರ್‌ ಅವರ ಬಾಲಿಶ ನಡವಳಿಕೆ, ಮುಖ್ಯಮಂತ್ರಿ ಮತ್ತು ಸಚಿವರ ಸೆಲ್ಫಿ–ರೀಲ್ಸ್‌ ಹುಚ್ಚು, ಸರ್ಕಾರದ ವೈಫಲ್ಯವೇ ಕಾರಣ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ ಸಿಎಂ, ಸಚಿವರೆಲ್ಲರೂ ವರ್ಕ್‌ಫ್ರಂ ಹೋಂ ಮಾಡುತ್ತಿದ್ದಾರೆ. ಅವರ ನಿರ್ಲಕ್ಷ್ಯ, ಪ್ರಚಾರಪ್ರಿಯತೆಯೇ ಘಟನೆಗೆ ಕಾರಣ. ಸಿಎಂ ಸಿದ್ದರಾಮಯ್ಯ ಅವರನ್ನು ಎ–1 ಆರೋಪಿ ಮಾಡಬೇಕು. ಡಿಸಿಎಂ ಡಿ.ಕೆ ಶಿಕುಮಾರ್‌ ಎ–2, ಗೃಹ ಸಚಿವ ಪರಮೇಶ್ವರ ಅವರನ್ನು ಎ–3 ಆರೋಪಿಯನ್ನಾಗಿ ಮಾಡಿ, ಎಫ್‌ಐಆರ್‌ ದಾಖಲಿಸಬೇಕು. ಈ ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಘಟನೆಯನ್ನು ನ್ಯಾಯಾಧೀಶರಿಂದ ತನಿಖೆ ಮಾಡಿಸುವುದಾಗಿ, ಸಿಐಡಿಗೆ ವಹಿಸುವುದಾಗಿ ಸಿಎಂ ಹೇಳಿದ್ದಾರೆ. ಈ ತನಿಖೆಗಳಿಂದ ಸತ್ಯಾಂಶ ಹೊರಬರಲು ಸಾಧ್ಯವೇ? ಘಟನೆಯನ್ನು ಸಿಬಿಐ ಮೂಲಕ ತನಿಖೆ ಮಾಡಿಸಬೇಕು’ ಎಂದರು.

‘ಆಟಗಾರರ ಸನ್ಮಾನ ಕಾರ್ಯಕ್ರಮದಲ್ಲಿ ಸರ್ಕಾರ ರಾಜ್ಯಪಾಲರನ್ನು ಅಪಮಾನಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಅನಗತ್ಯವಾಗಿ 20 ನಿಮಿಷ ಕಾಯಿಸಿ ಅಪಚಾರ ಮಾಡಲಾಗಿದೆ. ಇತಿಹಾಸದಲ್ಲೇ ಹೀಗೆ ಆಗಿಲ್ಲ’ ಎಂದು ಆಕ್ರೋಶಗೊಂಡರು.

‘ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳ ಮಕ್ಕಳ ಸೆಲ್ಫಿಗಾಗಿ ವಿಶೇಷ ವಿಮಾನದಲ್ಲಿ ಆಟಗಾರರನ್ನು ಕರೆಸಿಕೊಂಡ ಸರ್ಕಾರ 11 ಮಂದಿಯ ದುರಂತ ಸಾವಿಗೆ ಕಾರಣವಾಗಿದೆ. ಈ ಪಾಪದ ಹೊಣೆ ಹೊತ್ತು ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ನೀಡಬೇಕು. ಈ ಬಗ್ಗೆ ಚರ್ಚಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. ಮೃತರ ಕುಟುಂಬಕ್ಕೆ ಕನಿಷ್ಠ ₹1 ಕೋಟಿ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.