ADVERTISEMENT

ಕಸ ಗುತ್ತಿಗೆ: ನಗರಾಭಿವೃದ್ಧಿ ಇಲಾಖೆಗೆ 63 ಆಕ್ಷೇಪಗಳು ಸಲ್ಲಿಕೆ

ಆಕ್ಷೇಪಗಳ ಉಲ್ಲೇಖಿಸಿ ಬಿಎಸ್‌ಡಬ್ಲ್ಯುಎಂಎಲ್‌ಗೆ ನಗರಾಭಿವೃದ್ಧಿ ಇಲಾಖೆ ತಾಕೀತು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:58 IST
Last Updated 11 ಫೆಬ್ರುವರಿ 2026, 23:58 IST
<div class="paragraphs"><p>ಕಸ ಸಂಗ್ರಹ ವಾಹನ</p></div>

ಕಸ ಸಂಗ್ರಹ ವಾಹನ

   

(ಸಾಂದರ್ಭಿಕ ಚಿತ್ರ)

ನಗರಾಭಿವೃದ್ಧಿ ಇಲಾಖೆಗೆ 63 ಆಕ್ಷೇಪಗಳು ಸಲ್ಲಿಕೆ | ಬಿಡ್‌ಗಳ ತಾಂತ್ರಿಕ ಮೌಲ್ಯಮಾಪನದಲ್ಲಿ ಅಕ್ರಮ: ಆರೋಪ | ನಿಯಮಬಾಹಿರ ಗುತ್ತಿಗೆ ಪಡೆದಿದ್ದರೆ ತನಿಖೆ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವಿವಿಧ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಗುತ್ತಿಗೆಯನ್ನು ನಿಯಮಬಾಹಿರವಾಗಿ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಗೆ 63 ಆಕ್ಷೇಪಗಳು ಸಲ್ಲಿಕೆಯಾಗಿದ್ದು, ವಿವರಣೆಗಳನ್ನು ನೀಡಿ ಎಂದು ಇಲಾಖೆಯು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದೆ.

ADVERTISEMENT

ಜಿಬಿಎಯ ಐದೂ ಪಾಲಿಕೆಗಳ ವ್ಯಾಪ್ತಿಯನ್ನು 33 ಪ್ರತ್ಯೇಕ ಪ್ಯಾಕೇಜ್‌ಗಳಾಗಿ ವಿಭಜಿಸಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮವು (ಬಿಎಸ್‌ಡಬ್ಲ್ಯುಎಂಎಲ್‌) ಗುತ್ತಿಗೆ ನೀಡಿತ್ತು. ಈ ಸಂಬಂಧ ಕರೆಯಲಾಗಿದ್ದ ಟೆಂಡರ್‌ನಲ್ಲಿ ಅರ್ಹರನ್ನು ಕಡೆಗಣಿಸಿ, ಅನರ್ಹರಿಗೆ ಗುತ್ತಿಗೆ ನೀಡಲಾಗಿದೆ ಎಂದು ಇಲಾಖೆಗೆ ಹಲವು ಗುತ್ತಿಗೆದಾರರು ಆಕ್ಷೇಪಗಳನ್ನು ಸಲ್ಲಿಸಿದ್ದರು.

‘ಕಸ ವಿಲೇವಾರಿಯನ್ನು ನಿರ್ವಹಿಸಲು ಅಗತ್ಯವಿರುವ ವಿಂಗಡಣೆ ಘಟಕ, ಅಗತ್ಯ ಸಂಖ್ಯೆಯ ವಾಹನಗಳು ಮತ್ತು ಆರ್ಥಿಕವಾಗಿ ಸಮರ್ಥರಲ್ಲದವರಿಗೂ ಗುತ್ತಿಗೆ ನೀಡಲಾಗಿದೆ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅರ್ಹರ ಬಿಡ್‌ಗಳನ್ನು ತಿರಸ್ಕರಿಸಿದ್ದಾರೆ. ಬಿಡ್‌ಗಳ ತಾಂತ್ರಿಕ ಮೌಲ್ಯಮಾಪನ ಹಂತದಲ್ಲಿ ಅಕ್ರಮ ನಡೆದಿದೆ’ ಎಂದು ಆಕ್ಷೇಪ ಪತ್ರಗಳಲ್ಲಿ ವಿವರಿಸಲಾಗಿತ್ತು.

‘ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜನವರಿ 27ರಿಂದ ಫೆಬ್ರುವರಿ 6ರವರೆಗೆ ಆಕ್ಷೇಪಣೆಗಳ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ನಿಯಮಬಾಹಿರವಾಗಿ ಗುತ್ತಿಗೆ ನೀಡಿದ್ದರೆ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ’ ಎಂದು ಗುತ್ತಿಗೆದಾರರೊಬ್ಬರು ಮಾಹಿತಿ ನೀಡಿದರು.

ಜತೆಗೆ, ‘ಆಕ್ಷೇಪ ಸಲ್ಲಿಕೆಯಾಗಿರುವ ಎಲ್ಲ ಪ್ಯಾಕೇಜ್‌ಗಳ ಮೌಲ್ಯಮಾಪನ ನಡೆಸಿದ ಬಿಎಸ್‌ಡಬ್ಲ್ಯುಎಂಎಲ್‌ನ ಪ್ರಧಾನ ವ್ಯವಸ್ಥಾಪಕರಿಗೆ (ತಾಂತ್ರಿಕ) ಪ್ರಮಾಣಪತ್ರ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಸೂಚಿಸಿದೆ. ‘ಬಿಡ್‌ ಮೌಲ್ಯಮಾಪನದಲ್ಲಿ ನಿಯಮ ಉಲ್ಲಂಘನೆ ಆಗಿದ್ದರೆ, ಅದರ ಹೊಣೆ ನಾವೇ ಹೊರುತ್ತೇವೆ’ ಎಂದು ಪ್ರಮಾಣಪತ್ರ ನೀಡಿ ಎಂದು ತಾಕೀತು ಮಾಡಿದೆ’ ಎಂದು ಅವರು ವಿವರಿಸಿದರು. 

ನಗರಾಭಿವೃದ್ಧಿ ಇಲಾಖೆಯು ಈ ರೀತಿ ಸೂಚನೆ ನೀಡಿದೆ ಎಂಬುದನ್ನು ಬಿಎಸ್‌ಡಬ್ಲ್ಯುಎಂಎಲ್‌ ಮೂಲಗಳೂ ಖಚಿತಪಡಿಸಿದ್ದು, ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) ಇನ್ನಷ್ಟೇ ಪ್ರಮಾಣ ಪತ್ರ ಸಲ್ಲಿಸಬೇಕಿದೆ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.