ADVERTISEMENT

ಬೆಸ್ಕಾಂ ಟೆಂಡರ್‌ಗೆ ಆಕ್ಷೇಪ: ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:47 IST
Last Updated 12 ಫೆಬ್ರುವರಿ 2026, 23:47 IST
ಬೆಸ್ಕಾಂ ಲೋಗೊ
ಬೆಸ್ಕಾಂ ಲೋಗೊ   

ಬೆಂಗಳೂರು: ಬೆಸ್ಕಾಂ (ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ) ಅಧಿಕಾರಿಗಳ ಕಾರ್ಯನಿರ್ವಹಣೆಗಾಗಿ ಬಾಡಿಗೆ ವಾಹನ ಪಡೆದುಕೊಳ್ಳಲು ಕರೆಯಲಾಗಿದ್ದ ಟೆಂಡರ್‌ಗಳನ್ನು ಕಾರಣವಿಲ್ಲದೆ ರದ್ದುಪಡಿಸಿ ಹೊಸ ಟೆಂಡರ್ ಕರೆಯಲಾಗಿದೆ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಬೆಸ್ಕಾಂಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಆರ್.ಟಿ.ನಗರ ಮನೋರಾಯನ ಪಾಳ್ಯದ ಅಶ್ವತ್ಥ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಿಚಾರಣೆ ಆಲಿಸಿದ ನ್ಯಾಯಪೀಠ, ರಾಜ್ಯ ಇಂಧನ ಇಲಾಖೆ ಸೇರಿದಂತೆ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.

ADVERTISEMENT

ಏನಿದು ಅರ್ಜಿ?: ಬೆಸ್ಕಾಂ ಅಧಿಕಾರಿಗಳ ಸಂಚಾರಕ್ಕೆ 2 ವರ್ಷದ ಅವಧಿಗೆ 593 ವಾಹನಗಳನ್ನು ಬಾಡಿಗೆ ಸೇವೆ ಪಡೆದುಕೊಳ್ಳಲು ₹52.28 ಕೋಟಿ ಮೊತ್ತದ ಟೆಂಡರ್ ಹಾಗೂ ಬೆಸ್ಕಾಂ ವ್ಯಾಪ್ತಿಯ ಸರ್ವಿಸ್ ಸ್ಟೇಷನ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 531 ವಾಹನಗಳನ್ನು ಬಾಡಿಗೆ ಪಡೆದುಕೊಳ್ಳಲು ₹63.08 ಕೋಟಿ ಮೊತ್ತದ ಪ್ರತ್ಯೇಕ ಟೆಂಡರ್ ಅನ್ನು 2021-22ರಲ್ಲಿ ಕರೆಯಲಾಗಿತ್ತು.

‘ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ತಾಂತ್ರಿಕ ನಿರ್ದೇಶಕರು ತಮ್ಮವರಿಗೆ ಅನುಕೂಲ ಮಾಡಿಕೊಡಲು 19 ಪ್ಯಾಕೇಜ್‌ಗಳಲ್ಲಿ ಈ ಟೆಂಡರ್ ಕರೆದಿದ್ದರು. ಉದ್ದೇಶ ಈಡೇರದೇ ಹೋದಾಗ ಕರೆಯಲಾಗಿದ್ದ ಟೆಂಡರ್ ಅನ್ನು ವಿನಾಕಾರಣ ರದ್ದುಪಡಿಸಿ 2025ರ ಜೂನ್‌ನಿಂದ ಡಿಸೆಂಬರ್ ತನಕ 5 ಬಾರಿ ಹೊಸದಾಗಿ ಟೆಂಡರ್ ಕರೆಯಲಾಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ. ಆದ್ದರಿಂದ, ಟೆಂಡರ್ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.