
ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಪವಿತ್ರ ಗ್ರಂಥ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿರುವುದು ಶ್ಲಾಘನೀಯ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇಂದು (ಶುಕ್ರವಾರ) ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, ಭಾರತದ ಶ್ರೇಷ್ಠ ಪರಂಪರೆ ಮತ್ತು ನಮ್ಮ ಪುರಾಣದ ಹೆಗ್ಗುರುತುಗಳನ್ನು ಮತ್ತಷ್ಟು ಎತ್ತರಕ್ಕೇರಿಸಿ ಸಾರ್ವಕಾಲಿಕಗೊಳಿಸುವ ನಿಟ್ಟಿನಲ್ಲಿ ಪ್ರಧಾನಿಗಳ ದೃಷ್ಟಿಕೋನವು ನಮಗೆಲ್ಲರಿಗೂ ಅನುಕರಣೀಯ ಎಂದಿದ್ದಾರೆ.
ಮನುಕುಲದ ದಾರಿದೀಪ, ಅರಿವಿನ ಬೆಳಕಾಗಿರುವ ಭಗವದ್ಗೀತೆಯನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಮಾತ್ರವಲ್ಲ, ಶಿಕ್ಷಣದ ಪ್ರತಿ ಹಂತದಲ್ಲಿಯೂ ಪಠ್ಯವಾಗಬೇಕು ಎಂಬುದು ನನ್ನ ಆಶಯ. ಈ ಬಗ್ಗೆ ಅಗತ್ಯ ಕ್ರಮ ವಹಿಸುವ ಬಗ್ಗೆ ನಾನು ಕೇಂದ್ರದ ಶಿಕ್ಷಣ ಮಂತ್ರಿಗಳಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ.
ಹಾಗೆಯೇ ನಮ್ಮ ನೆಲದ ಅನರ್ಘ್ಯ ಸಂಪತ್ತು ವಾಲ್ಮೀಕಿ ವಿರಚಿತ ರಾಮಾಯಣ ಮತ್ತು ವ್ಯಾಸ ವಿರಚಿತ ಮಹಾಭಾರತ ಮಹಾಕಾವ್ಯಗಳನ್ನು ಮಕ್ಕಳಿಗೆ ಬೋಧನೆ ಮಾಡುವುದು ಅಗತ್ಯ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.