ADVERTISEMENT

ದ್ವೇಷ ಭಾಷಣ ಕಾಯ್ದೆಯಡಿ ಭರತ್‌ ರೆಡ್ಡಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 10:43 IST
Last Updated 3 ಜನವರಿ 2026, 10:43 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಹುಬ್ಬಳ್ಳಿ: ‘ಬಳ್ಳಾರಿಯ ಬ್ಯಾನರ್‌ ಪ್ರಕರಣದ ಪ್ರಮುಖ ಆರೋಪಿ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಆಗಿದ್ದು, ದ್ವೇಷಭಾಷಣ ಕಾಯ್ದೆಯಡಿ ಅವರನ್ನು ಬಂಧನ ಮಾಡಬೇಕು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಕಾರಣ ಯಾರು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಹೀಗಾಗಿಯೇ ಶಾಸಕ ಭರತ್‌ ರೆಡ್ಡಿ ದೂರವಾಣಿ ಕರೆ ಮಾಡಿದರೂ ಸಿಎಂ ಅವರ ಜೊತೆ ಮಾತನಾಡಲಿಲ್ಲ. ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಅವರ ಜೊತೆ ಮಾತನಾಡಿ, ಶಾಸಕರಿಗೆ ಬುದ್ದಿ ಹೇಳಿ ಎಂದಿದ್ದಾರೆ. ಮುಖ್ಯಮಂತ್ರಿ ಅವರು ಯಾರು ತನ್ನವರು ಎಂದುಕೊಂಡಿದ್ದರೋ, ಅವರಿಂದಲೇ ಹೆಸರು ಹಾಳಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಬ್ಯಾನರ್‌ ಅಳವಡಿಸಿದಾಗ ಗಲಾಟೆ ನಡೆದಿದ್ದು, ಆ ಸಂದರ್ಭ ಜನಾರ್ದನ ರೆಡ್ಡಿ ಸ್ಥಳದಲ್ಲಿರಲಿಲ್ಲ. ಆಗ ಸ್ಥಳಕ್ಕೆ ಬಂದ ಶಾಸಕ ಭರತ್‌ ರೆಡ್ಡಿ ಐದು ನಿಮಿಷದಲ್ಲಿ ಸುಟ್ಟು ಹಾಕುತ್ತಿದ್ದೆ, ಮೂರ್ತಿ ಪ್ರತಿಷ್ಠಾಪನೆಯಿಂದಾಗಿ ಬಿಟ್ಟಿದ್ದೇನೆ ಎಂದು ಬೆದರಿಕೆ ಹಾಕಿದ್ದರು. ಇದು ದ್ವೇಷ ಭಾಷಣ ಕಾಯ್ದೆಯಡಿ ಬರುವುದಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಸರ್ಕಾರಿ ಗನ್‌ ಮ್ಯಾನ್‌ ಬಳಸುವ ಗುಂಡಿಗೆ ಕರಾರುವಕ್ಕಾಗಿ ಲೆಕ್ಕ ನೀಡಬೇಕು. ಖಾಸಗಿಯಾಗಿ ಸಾಕಷ್ಟು ಮಂದಿ ಗನ್‌ ಮ್ಯಾನ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಗುಂಡು ಹಾರಿಸಿ ಎಲ್ಲೋ ತಲೆ ಮರೆಸಿಕೊಳ್ಳುತ್ತಾರೆ. ಅವರು ಬಳಸುವ ಗುಂಡಿಗೆ ಲೆಕ್ಕ ಯಾಕೆ ಇಲ್ಲ? ಗುಂಪು ಗೂಡಿದ್ದು, ಗಲಾಟೆ ನಡೆಸಿದ್ದು, ಹಲ್ಲೆ ನಡೆಸಿದ್ದು, ಗುಂಡು ಹೊಡೆದಿದ್ದು ಹಾಗೂ ಸತ್ತಿದ್ದು ಅವರದ್ದೇ ಪಕ್ಷದವರು. ಆದರೆ, ಪ್ರಕರಣ ದಾಖಲಾಗಿದ್ದು ಮಾತ್ರ ಬಿಜೆಪಿಯ ಜನಾರ್ದನ ರೆಡ್ಡಿ ಹಾಗೂ ಇತರರ ವಿರುದ್ಧ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.