ADVERTISEMENT

ಕೃಷಿ ಕಾಯ್ದೆಗಳ ವಿರುದ್ಧ ಬಂದ್‌ ಇಲ್ಲ; ಕಾಯ್ದೆಯ ಶವಯಾತ್ರೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 20:13 IST
Last Updated 25 ಮಾರ್ಚ್ 2021, 20:13 IST
ಕುರಬೂರು ಶಾಂತಕುಮಾರ್
ಕುರಬೂರು ಶಾಂತಕುಮಾರ್   

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಹೋರಾಟ ಸಮಿತಿಯು ಕರೆ ನೀಡಿರುವ ಮುಷ್ಕರ ಬೆಂಬಲಿಸಿ ರಾಜ್ಯದಾದ್ಯಂತ ಶುಕ್ರವಾರ ‘ಕೃಷಿ ಕಾಯ್ದೆಗಳ ಶವಯಾತ್ರೆ’ ನಡೆಯಲಿದೆ.

‘ರಾಜ್ಯದಲ್ಲಿ ನಾಲ್ಕೈದು ತಿಂಗಳಲ್ಲಿ ಹಲವು ಬಾರಿ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ಮಾಡಲಾಗಿದೆ. ಈ ಬಾರಿ ಬಂದ್ ಬದಲು ಶವಯಾತ್ರೆ ನಡೆಸಲು ಎಲ್ಲ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ. ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತ ನಾಯಕ ರಾಕೇಶ್‌ ಟಿಕಾಯತ್‌ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳನ್ನು ಪ್ರಮುಖವಾಗಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುವುದು’ ಎಂದರು.

ADVERTISEMENT

‘ಪೊಲೀಸ್ ಬಲದ ಮೂಲಕ ರೈತ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಬೆಂಬಲ:ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಅನೇಕ ಸಂಘಟನೆಗಳು ‍ಪ್ರತಿಭಟನೆ ನಡೆಸಲು ಸಜ್ಜಾಗಿವೆ.

‘ರೈತರು, ಮಹಿಳೆಯರು ಮೂರುವರೆ ತಿಂಗಳಿನಿಂದ ದೆಹಲಿಯ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಮುಷ್ಕರ ಬೆಂಬಲಿಸಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹೇಳಿದೆ.

‘ಮುಷ್ಕರಕ್ಕೆ ನಮ್ಮ ಬೆಂಬಲವಿದೆ. ಆದರೆ ಬಂದ್‌ಗೆ ಕರೆ ನೀಡಿಲ್ಲ. ಆಟೊ, ಟ್ಯಾಕ್ಸಿ ಸೇವೆ ಎಂದಿನಂತೆ ಇರುತ್ತದೆ. ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಸಿಐಟಿಯು ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.

ಭಾರತ್‌ ಬಂದ್‌ ಅಂಗವಾಗಿ ನಡೆಯಲಿರುವ ಮುಷ್ಕರಕ್ಕೆ ಜೆಡಿಎಸ್‌, ಆಮ್‌ ಆದ್ಮಿ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.