ನೋಟಿನ ಕಂತೆಗಳಿರುವ ಟ್ರಂಕ್‌ನೊಂದಿಗೆ ಬೈಕ್ ಮೇಲೆ ಪರಾರಿಯಾದ ಅಪರಿಚಿತರು
ಬೀದರ್: ಎಟಿಎಂಗೆ ಜಮಾ ಮಾಡಲು ಬ್ಯಾಂಕಿನಿಂದ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ಅಪರಿಚಿತರು, ₹92 ಲಕ್ಷ ನಗದು ದರೋಡೆ ಮಾಡಿ ಬೈಕ್‌ನಲ್ಲಿ ಪರಾರಿಯಾಗಿರುವ ಸಿನಿಮೀಯ ರೀತಿಯ ಘಟನೆ ನಗರದ ಹೃದಯ ಭಾಗದಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ನಗರದ ಚಿದ್ರಿ ನಿವಾಸಿ ಗಿರಿ ವೆಂಕಟೇಶ ಮಲ್ಲಪ್ಪ (37) ಮೃತ ವ್ಯಕ್ತಿ. ನಗರದ ಲಾಡಗೇರಿ ನಿವಾಸಿ ಶಿವಕುಮಾರ (35) ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಸಿಎಂಎಸ್ ಖಾಸಗಿ ಸಂಸ್ಥೆಯ ‘ಕ್ಯಾಶ್ ಕಸ್ಟೋಡಿಯನ್’ಗಳಾಗಿದ್ದರು. ನಿತ್ಯ ಬ್ಯಾಂಕಿನಿಂದ ಹಣ ಸಂಗ್ರಹಿಸಿ, ಅದನ್ನು ನಗರದ ವಿವಿಧ ಎಟಿಎಂಗಳಲ್ಲಿ ಜಮೆ ಮಾಡುವ ಕೆಲಸ ಮಾಡುತ್ತಿದ್ದರು.
‘ಗುರುವಾರ ಬೆಳಿಗ್ಗೆ 10.30ರಿಂದ 11ರ ನಡುವೆ ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಗಿರಿ ವೆಂಕಟೇಶ ಹಾಗೂ ಶಿವಕುಮಾರ ಅವರು ನಗರದ ಎಸ್‌ಬಿಐ ಮುಖ್ಯ ಕಚೇರಿಗೆ ಬಂದು, ನೋಟಿನ ಕಂತೆಗಳಿರುವ ಟ್ರಂಕ್ ಅನ್ನು ಜೀಪಿನಲ್ಲಿ ಇರಿಸುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಬಂದು, ಅವರ ಮೇಲೆ ಹಲ್ಲೆ ನಡೆಸಿ, ಟ್ರಂಕ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಬಳಿಕ ಕಣ್ಣಿಗೆ ಕಾರದ ಪುಡಿ ಎರಚಿ, ಗಿರಿ ವೆಂಕಟೇಶ ಹಾಗೂ ಶಿವಕುಮಾರ ಮೇಲೆ ಗುಂಡಿನ ದಾಳಿ ನಡೆಸಿ, ಟ್ರಂಕ್‌ನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ತೀವ್ರ ರಕ್ತಸ್ರಾವವಾಗಿದ್ದ ಗಿರಿ ವೆಂಕಟೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಕುಮಾರ ಅವರನ್ನು ತಕ್ಷಣವೇ ಬ್ರಿಮ್ಸ್‌ಗೆ ಕೊಂಡೊಯ್ದು, ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹೈದರಾಬಾದ್‌ಗೆ ಕೊಂಡೊಯ್ಯಲಾಗಿದೆ. ಹಣದೊಂದಿಗೆ ಪರಾರಿಯಾಗುತ್ತಿದ್ದ ಅಪರಿಚಿತರ ಮೇಲೆ ಸ್ಥಳದಲ್ಲಿದ್ದ ಕೆಲವರು ಕಲ್ಲು ತೂರಿ ತಡೆಯಲು ಯತ್ನಿಸಿದ್ದಾರೆ. ಆದರೆ, ಅವರು ಗಾಳಿಯಲ್ಲಿ ಗುಂಡು ಹಾರಿಸಿ, ಹೆದರಿಸಿ ಓಡಿ ಹೋಗಿದ್ದಾರೆ. ಎಟಿಎಂಗಳಿಗೆ ಹಣ ಕೊಂಡೊಯ್ಯುವಾಗ ಸಿಎಂಎಸ್ ಕಂಪನಿ ಗನ್‌ಮ್ಯಾನ್ ಕೂಡ ಜೊತೆಗಿರುತ್ತಿದ್ದರು. ಆದರೆ, ಗುರುವಾರ ಅವರು ರಜೆ ಮೇಲಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿ, ಸಾಕ್ಷ್ಯ ಸಂಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮಧ್ಯ ಭಾಗದಲ್ಲಿರುವ ಸದಾ ಜನದಟ್ಟಣೆಯ ಎಸ್‌ಬಿಐ ಕಚೇರಿ ಎದುರು ಈ ದರೋಡೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಸ್ಥಳಕ್ಕೆ ದೌಡಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಎರಡು–ಮೂರು ಬಾರಿ ಲಾಠಿ ಬೀಸಿದರು. ಇಡೀ ದಿನ ಮುಖ್ಯರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದರು.
ಎಸ್‌ಬಿಐ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ, ನೋಟಿನ ಕಂತೆಗಳಿರುವ ಟ್ರಂಕ್ ಅನ್ನು ಬೈಕ್ ಮೇಲೆ ಇಟ್ಟುಕೊಂಡ ಅಪರಿಚಿತರು
ಆಸ್ಪತ್ರೆ ಎದುರು ಕುಟುಂಬದವರ ಧರಣಿ:
ಘಟನೆಗೆ ಕಾರಣರಾದವರನ್ನು ಬಂಧಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಮೃತ ಗಿರಿ ವೆಂಕಟೇಶ ಅವರ ಕುಟುಂಬ ಸದಸ್ಯರು ಬೀದರ್‌ನ ಬ್ರಿಮ್ಸ್ ಎದುರು ಧರಣಿ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಮನವೊಲಿಕೆ ಯತ್ನ ವಿಫಲವಾಯಿತು.
ಹೈದರಾಬಾದ್‌ನಲ್ಲೂ ಫೈರಿಂಗ್
ಘಟನೆಯ ಬಳಿಕ ಅಪರಿಚಿತರು ಟ್ರಂಕ್‌ನೊಂದಿಗೆ ಬೈಕ್ ಮೇಲೆ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಳಿಕ ತೆಲಂಗಾಣ ಗಡಿ ಮೂಲಕ ಹೈದರಾಬಾದ್‌ನ ಅಫ್ಜಲ್ ಗಂಜ್ ಪ್ರವೇಶಿಸಿದ್ದಾರೆ. ಅಲ್ಲಿಂದ ಛತ್ತೀಸಗಢದ ರಾಯಪುರಕ್ಕೆ ಹೋಗಲು ಯೋಜನೆ ರೂಪಿಸಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಬೆನ್ನು ಹತ್ತಿ ಸ್ಥಳಕ್ಕೆ ಧಾವಿಸಿದ್ದ ಬೀದರ್ ಹಾಗೂ ಹೈದರಾಬಾದ್ ಪೊಲೀಸರ ಮೇಲೆ ದರೋಡೆಕೋರರು ಗುಂಡಿನ ದಾಳಿ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಸ್ಪತ್ರೆ ಎದುರು ಕುಟುಂಬದವರ ಧರಣಿ
ಘಟನೆಗೆ ಕಾರಣರಾದವರನ್ನು ಬಂಧಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಮೃತ ಗಿರಿ ವೆಂಕಟೇಶ ಅವರ ಕುಟುಂಬ ಸದಸ್ಯರು ಬೀದರ್‌ನ ಬ್ರಿಮ್ಸ್ ಎದುರು ಧರಣಿ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಮನವೊಲಿಕೆ ಯತ್ನ ವಿಫಲವಾಯಿತು.
ದರೋಡೆ ನಡೆದ ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಗುರುವಾರ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು. ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.