ADVERTISEMENT

ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣ; ಐವರು ಆರೋಪಿಗಳಿಗೆ 5 ದಿನ ಸಿಐಡಿ ಕಸ್ಟಡಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 16:31 IST
Last Updated 10 ಜನವರಿ 2025, 16:31 IST
   

ಬೀದರ್‌: ಯುವ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತ, ಕಲಬುರಗಿಯ ಮಾಜಿ ಕಾರ್ಪೊರೇಟರ್‌ ರಾಜು ಕಪನೂರ ಸೇರಿದಂತೆ ಐವರನ್ನು ಶುಕ್ರವಾರ ಸಂಜೆ ವಶಕ್ಕೆ ಪಡೆದು, ಇಲ್ಲಿನ ಜೆಎಂಎಫ್‌ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವೂ ಐದೂ ಜನ ಆರೋಪಿಗಳನ್ನು ಐದು ದಿನಗಳವರೆಗೆ ಸಿಐಡಿ ಕಸ್ಟಡಿಗೆ ವಹಿಸಿ ಶುಕ್ರವಾರ ರಾತ್ರಿ ಆದೇಶಿಸಿತು.

ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ರಾಮಮೂರ್ತಿ ಅವರು ಆರೋಪಿಗಳ ಪರ ವಕೀಲರು ಹಾಗೂ ಸಿಐಡಿ ವಕೀಲರ ವಾದ ಪ್ರತಿವಾದ ಆಲಿಸಿ ಸಿಐಡಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದರು. ಎರಡು ಗಂಟೆಗೂ ಹೆಚ್ಚು ಕಾಲ ವಾದ–ಪ್ರತಿವಾದ ನಡೆಯಿತು.

ಸಿಐಡಿ ಅಧಿಕಾರಿಗಳು ರಾಜು ಕಪನೂರ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಗೋರಖನಾಥ ಸಜ್ಜನ್‌, ಬ್ಲಾಕ್‌ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ನಂದಕುಮಾರ ನಾಗಭುಜಂಗೆ, ಕಲಬುರಗಿಯ ಪ್ರಥಮ ದರ್ಜೆ ಗುತ್ತಿಗೆದಾರ ರಾಮನಗೌಡ ಪಾಟೀಲ ಹಾಗೂ ಸತೀಶ ರತ್ನಾಕರ ದುಬಲಗುಂಡಿ ಅವರನ್ನು ತಮ್ಮ ಕಸ್ಟಡಿಗೆ ಕರೆದೊಯ್ದರು.

ADVERTISEMENT

ಇದಕ್ಕೂ ಮುನ್ನ ನಗರದ ಬೀದರ್‌ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ಎದುರು ಐದೂ ಜನ ವಿಚಾರಣೆಗೆ ಹಾಜರಾದರು. ಸುಮಾರು ಎರಡು ತಾಸಿಗೂ ಅಧಿಕ ಹೊತ್ತಿನ ವಿಚಾರಣೆಯ ಬಳಿಕ ಎಲ್ಲರ ಹೇಳಿಕೆ ದಾಖಲಿಸಿ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಕರೆದೊಯ್ದರು. ಘಟನೆ ನಡೆದ 17 ದಿನಗಳ ನಂತರ ಘಟನೆ ಸಂಬಂಧ ಐವರು ಆರೋಪಿಗಳನ್ನು ಮೊದಲ ಬಾರಿಗೆ ವಿಚಾರಣೆಗೆ ಒಳಪಡಿಸಿ ವಶಕ್ಕೆ ಪಡೆಯಲಾಗಿದೆ.

ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿ ಡೆತ್‌ನೋಟ್‌ ಬರೆದಿಟ್ಟು ಸಚಿನ್‌ ಪಾಂಚಾಳ್‌ ಡಿ. 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂಬತ್ತು ಜನರ ವಿರುದ್ಧ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.