ADVERTISEMENT

ವಿದೇಶ ಪ್ರವಾಸ, ಹನಿಮೂನ್‌ಗೆ ಹೋಗಬೇಡಿ: ಯಡಿಯೂರಪ್ಪ ಕಟ್ಟಪ್ಪಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 19:00 IST
Last Updated 26 ಏಪ್ರಿಲ್ 2019, 19:00 IST
ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಚಿತ್ರದಲ್ಲಿದ್ದಾರೆ.
ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಚಿತ್ರದಲ್ಲಿದ್ದಾರೆ.   

ಬೆಂಗಳೂರು: ‘ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಗಿಯುವವರೆಗೆ ಪಕ್ಷದ ನಾಯಕರು ವಿದೇಶ ಪ್ರವಾಸಕ್ಕಾಗಲಿ ಹಾಗೂ ಹನಿಮೂನ್‌ಗಾಗಲಿ ಹೋಗಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕಟ್ಟಪ್ಪಣೆ ವಿಧಿಸಿದರು.

ಎರಡು ಕ್ಷೇತ್ರಗಳ ಉಪಚುನಾವಣೆ ಸಿದ್ಧತೆ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಎರಡೂ ಕ್ಷೇತ್ರಗಳಿಗೆ ನಾಲ್ಕೈದು ನಾಯಕರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಎಲ್ಲ ಹೊರೆಯನ್ನು ಅವರ ಮೇಲೆ ಹೊರಿಸುವುದು ಸರಿಯಲ್ಲ. ಉಳಿದ ಮುಖಂಡರು ಜಿಲ್ಲಾ ಪಂಚಾಯಿತಿ, ಬೂತ್‌ ಮಟ್ಟಗಳಿಗೆ ತೆರಳಿ ಪ್ರಚಾರ ಮಾಡಬೇಕು. ಎರಡೂ ಕ್ಷೇತ್ರಗಳಲ್ಲೂ ಪಕ್ಷ ಗೆಲುವು ಸಾಧಿಸಬೇಕು. ಮೇ 23ರ ಬಳಿಕ ಎಲ್ಲಿಗೆ ಬೇಕಾದರೂ ಪ್ರವಾಸಕ್ಕೆ ಹೋಗಿ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 22 ಸ್ಥಾನಗಳಲ್ಲಿ ಗೆಲ್ಲಲಿದೆ. ಚಿಕ್ಕಬಳ್ಳಾಪುರದಲ್ಲಿ ನಮ್ಮ ಅಭ್ಯರ್ಥಿ ಎದುರು ಎಂ. ವೀರಪ್ಪ ಮೊಯಿಲಿ ಈಗಾಗಲೇ ಸೋತಾಗಿದೆ. ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ, ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲುವುದು ಶೇ 100ರಷ್ಟು ಖಚಿತ. ತುಮಕೂರಿನಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡರು ಸೋಲು ಅನುಭವಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಮೈತ್ರಿ ಪಕ್ಷಗಳ ಘಟಾನುಘಟಿ ನಾಯಕರು ಹೀನಾಯವಾಗಿ ಸೋಲಲಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಪಕ್ಷದ ಘಟಾನುಘಟಿ ನಾಯಕರಿಗೆ ಈ ಭಾರಿ ಜನ ಸೂಕ್ತ ಉತ್ತರ ನೀಡಲಿದ್ದಾರೆ’ ಎಂದರು.

ADVERTISEMENT

‘ಮೈತ್ರಿ ಸರ್ಕಾರದಲ್ಲಿ ಗೊಂದಲ ಶುರುವಾಗಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಉಭಯ ಪಕ್ಷಗಳಲ್ಲಿ ಹೊಡೆದಾಟ ಬಡಿದಾಟ ಆರಂಭವಾಗಲಿದೆ’ ಎಂದರು.

ಉಪಚುನಾವಣೆಗೂ ತಂತ್ರಗಾರಿಕೆ: ‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಗೆಲುವಿಗೆ ರೂಪಿಸಿದ ತಂತ್ರಗಾರಿಕೆ ಯಶಸ್ವಿಯಾಗಿದ್ದು, ಅದನ್ನೇ ಉಪ ಚುನಾವಣೆಯಲ್ಲೂ ಅಳವಡಿಸಿಕೊಳ್ಳಲಾಗುತ್ತದೆ’ ಎಂದು ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್. ಅಶೋಕ್ ತಿಳಿಸಿದರು.

ಚುನಾವಣಾ ನಿರ್ವಹಣಾ ಸಮಿತಿಯ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆ ವೇಳೆ ನಡೆಸಿದ ಪತ್ರಿಕಾಗೋಷ್ಠಿಗಳು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರುಗಳು, ಸಭೆ ಹಾಗೂ ಸಮಾವೇಶಗಳು, ಜನಸಂಪರ್ಕ ಸಭೆ, ಬ್ಲಾಕ್ ಹಾಗೂ ಬೂತ್ ಸಬಲೀಕರಣ ಕಾರ್ಯಕ್ರಮಗಳು, ರಾಷ್ಟ್ರೀಯ ನಾಯಕರು ಹಾಗೂ ಪ್ರಧಾನಿ ಕಾರ್ಯಕ್ರಮ ನಿರ್ವಹಣೆ, ಚುನಾವಣಾ ಸಂದರ್ಭದಲ್ಲಿ ಎದುರಾದ ಸಮಸ್ಯೆ ಕುರಿತ ವರದಿಯನ್ನು ಅಶೋಕ್ ಅವರು ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.