ADVERTISEMENT

ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಅದೇಶವೇ ಮೇಲು: ಕಾಂಗ್ರೆಸ್‌ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2022, 11:22 IST
Last Updated 13 ಜುಲೈ 2022, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಂಧನ ಸಚಿವ ವಿ. ಸುನಿಲ್‌ ಕುಮಾರ್ ಅವರ ಒತ್ತಾಯಕ್ಕೆ ಮಣಿದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನ ವಿಷಯದಲ್ಲೇ ಅಳವಡಿಸಲು ಆದೇಶ ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌, ‘ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಅದೇಶವೇ ಮೇಲು’ ಎಂದು ಹರಿಹಾಯ್ದಿದೆ.

‘ನಾಡಿನ ಗೌರವಾನ್ವಿತ ಮಠಾಧೀಶರು, ಸಾಹಿತಿಗಳು ಹಲವು ಪತ್ರ ಬರೆದರೂ ಸ್ಪಂದಿಸದ ಶಿಕ್ಷಣ ಸಚಿವರು ಇಂದನ ಸಚಿವ ಸುನೀಲ್‌ ಕುಮಾರ್‌ ಅವರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಸರ್ಕಾರಕ್ಕೆ ಮಠಾಧೀಶರ ಮೇಲೆ ಗೌರವವಿಲ್ಲ, ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ ಎಂಬುದಕ್ಕೆ ಈ ಘಟನೆಯೇ ನಿದರ್ಶನ’ ಎಂದು ಟೀಕಿಸಿದೆ.

ADVERTISEMENT

‘ಪಠ್ಯ ಪರಿಷ್ಕರಣೆ ವಿರೋಧಿಸಿ ಆದಿಚುಂಚನಗಿರಿ ಶ್ರೀಗಳು, ಪಂಡಿತಾರಾಧ್ಯ ಶ್ರೀಗಳು, ಜಯಮೃತ್ಯುಂಜಯ ಶ್ರೀಗಳು, ಲಿಂಗಾಯತ ಮಠಾಧೀಶರು ಹಾಗೂ ನಾಡಿನ ಹಲವು ಸಾಹಿತಿಗಳು ಪತ್ರ ಬರೆದರೂ ಉತ್ತರಿಸದ ಶಿಕ್ಷಣ ಸಚಿವರು ಸಚಿವ ಸುನಿಲ್ ಕುಮಾರ್‌ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಬಿಜೆಪಿಯ ಗೌರವ ಯಾರ ಮೇಲೆ? ಆದ್ಯತೆ ಯಾವುದಕ್ಕೆ?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಬ್ರಹ್ಮಶ್ರೀ ನಾರಾಯಣ ಗುರು ಅವರಿಗೆ ಸಂಬಂಧಿಸಿದ ಪಠ್ಯವನ್ನು ಈ ಹಿಂದೆ ಇದ್ದಂತೆ ಸಮಾಜ ವಿಜ್ಞಾನ ವಿಷಯದಲ್ಲೇ ಅಳವಡಿಸುವಂತೆ ಸುನಿಲ್‌ ಕುಮಾರ್‌ ಅವರು ಬಿ.ಸಿ. ನಾಗೇಶ್‌ ಅವರಿಗೆ ಪತ್ರ ಬರೆದಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಉಪಸ್ಥಿತಿಯಲ್ಲೇ ನಾಗೇಶ್‌ ಅವರನ್ನು ಸೋಮವಾರ ಭೇಟಿಮಾಡಿ ಪತ್ರವನ್ನು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.