ADVERTISEMENT

ಸಿದ್ದರಾಮಯ್ಯ ವಿರೋಧಿ ಪ್ರತಿಭಟನೆ: ಹಿಂದುಳಿದವರೆಂದರೆ ಬಿಜೆಪಿಗೆ ಕೋಪ–ಎಂ.ಬಿ.ಪಾಟೀಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಆಗಸ್ಟ್ 2022, 13:24 IST
Last Updated 18 ಆಗಸ್ಟ್ 2022, 13:24 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ಮಡಿಕೇರಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಕಾಂಗ್ರೆಸ್‌ ನಾಯಕ ಎಂ.ಬಿ.ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುಳಿದವರೆಂದರೆ ಬಿಜೆಪಿಯ ಮನುವಾದಿಗಳಿಗೆ ಕೆಂಡದಂತಹ ಕೋಪವೆಂದು ಅವರು ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಎಂ.ಪಿ.ಪಾಟೀಲ, ‘ಬಿಜೆಪಿಯ ಮನುವಾದಿಗಳಿಗೆ ಶೂದ್ರರು-ಹಿಂದುಳಿದವರೆಂದರೆ ಕೆಂಡದಂತಹ ಕೋಪ ಎಂಬುದಕ್ಕೆ ಮಡಿಕೇರಿಯಲ್ಲಿ ನಡೆದ ಘಟನೆಯೇ ಸಾಕ್ಷಿ. ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಲಾಗುತ್ತಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಹೀನ ಕೃತ್ಯಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಜೆಪಿಗರು ತೋರಿದ್ದಾರೆ. ಬಸವಣ್ಣ-ರಾಯಣ್ಣ-ದಾಸ ಶ್ರೇಷ್ಠರನ್ನು ಕಂಡಂತಹ ಈ ನಾಡಿನಲ್ಲಿ ನಿಮ್ಮ ಕುತಂತ್ರಗಳು ನಡೆಯದು’ ಎಂದೂ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದ್ದಾರೆ.

ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ ಮಡಿಕೇರಿಗೆ ಬಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು ಕೋಳಿಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು ವೃತ್ತದ ಮತ್ತೊಂದು ಪಾರ್ಶ್ವದಲ್ಲಿ ಪ್ರತಿಭಟನೆ ಕುಳಿತರು.‌ ಸುಮಾರು ಅರ್ಧಗಂಟೆಗಳ ಕಾಲ ಉಭಯ ಕಾರ್ಯಕರ್ತರು ಒಂದೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.