ADVERTISEMENT

ಜಿಲ್ಲಾ ಸಲಹಾ ಮಂಡಳಿ ಅನುಮೋದನೆ ಇಲ್ಲದೇ ಕೆಕೆಆರ್‌ಡಿಬಿ ಅನುದಾನ ಮಂಜೂರಾತಿ

ಕೆಕೆಆರ್‌ಡಿಬಿ ನಡೆಗೆ ಬಿಜೆಪಿ ಶಾಸಕರಿಂದಲೇ ಆಕ್ಷೇಪ!

ರಾಜೇಶ್ ರೈ ಚಟ್ಲ
Published 3 ಜುಲೈ 2022, 23:30 IST
Last Updated 3 ಜುಲೈ 2022, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಕೆಆರ್‌ಡಿಬಿ) ಮ್ಯಾಕ್ರೋ ಯೋಜನೆಯ ಅನುದಾನವನ್ನು ‘ಜಿಲ್ಲಾ ಸಲಹಾ ಮಂಡಳಿ’ಯ ಅನುಮೋದನೆ ಇಲ್ಲದೇ ಮಂಡಳಿಯ ಅಧ್ಯಕ್ಷರ ಶಿಫಾರಸ್ಸಿನ ಮೇರೆಗೆ ಕಾರ್ಯದರ್ಶಿ ಮಂಜೂರು ಮಾಡಿರುವುದಕ್ಕೆ ಆ ಭಾಗದ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಸಕರ ಆಕ್ಷೇಪವನ್ನು ಉಲ್ಲೇಖಿಸಿ ಕೆಕೆಆರ್‌ಡಿಬಿ ಕಾರ್ಯದರ್ಶಿಗೆ ಪತ್ರ ಬರೆದಿರುವ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌, ‘2021–22ನೇ ಸಾಲಿನಲ್ಲಿ ನಿಗದಿಪಡಿಸಿದ ₹104.77 ಕೋಟಿಯಲ್ಲಿ ಜಿಲ್ಲಾ ಸಲಹಾ ಸಮಿತಿ ಒಪ್ಪಿಗೆ ನೀಡಿದ ₹ 43.12 ಕೋಟಿಯ ಕಾಮಗಾರಿ ಹೊರತುಪಡಿಸಿ, ಉಳಿದ ₹61.64 ಕೋಟಿಯ ಕಾಮಗಾರಿ ರದ್ದುಗೊಳಿಸಬೇಕು. ಪ್ರಸಕ್ತ ಸಾಲಿನಲ್ಲಿ (2022–23) ಜಿಲ್ಲಾ ಸಲಹಾ ಸಮಿತಿಯ ಒಪ್ಪಿಗೆ ಪಡೆಯದೆ ಅನುಮೋದನೆ ನೀಡಿರುವ ₹73.01 ಕೋಟಿ (8 ಕಾಮಗಾರಿಗಳು) ಯೋಜನೆಯನ್ನು ತಕ್ಷಣ ರದ್ದುಗೊಳಿಸಬೇಕು’ ಎಂದು ಸೂಚಿಸಿದ್ದಾರೆ.

ಈ ಪತ್ರದ ಪ್ರತಿಯನ್ನು ವಿವರವಾದ ಟಿಪ್ಪಣಿ ಸಹಿತ ಮುಖ್ಯಮಂತ್ರಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಮುಖ್ಯಕಾರ್ಯದರ್ಶಿ, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ, ಲೋಕಾಯುಕ್ತಕ್ಕೆ ಕಳುಹಿಸಿರುವ ಅವರು, ‘ಜಿಲ್ಲಾ ಸಲಹಾ ಸಮಿತಿಯ ಅನುಮೋದನೆ ಇಲ್ಲದೆ ಯೋಜನೆಗಳಿಗೆ ಮಂಜೂರಾತಿ ನೀಡಿದರೆ ಮಂಡಳಿಯೇ ಹೊಣೆ’ ಎಂದೂ ತಿಳಿಸಿದ್ದಾರೆ.

ADVERTISEMENT

ಪತ್ರದಲ್ಲಿ ಏನಿದೆ?:

‘ಜಿಲ್ಲಾ ಉಸ್ತವಾರಿ ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆಯಲ್ಲಿ ಜೂನ್‌ 25ರಂದು ಜರುಗಿದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ, ಒಂದೇ ವಿಧಾನಸಭಾ ಕ್ಷೇತ್ರಕ್ಕೆ ಅನುದಾನವನ್ನು ಸೀಮಿತಗೊಳಿಸದೆ, ಸಮಾನವಾಗಿ ಹಂಚಿಕೆ ಮಾಡುವಂತೆ ಎಲ್ಲ ಶಾಸಕರು ಕೋರಿದ್ದರು. ಹೀಗಾಗಿ, 2022–23ನೇ ಸಾಲಿನ ಮ್ಯಾಕ್ರೋ ಅನುದಾನ ₹ 105.26 ಕೋಟಿಯನ್ನು ಜಿಲ್ಲೆಯ ಶಾಸಕರಿಗೆ ಸಮಾನವಾಗಿ ಹಂಚಿಕೆ ಮಾಡಿ ಕಾಮಗಾರಿ ಅನುಮೋದನೆಗೆ ಮಂಡಳಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ಆದರೆ, ₹ 73.01 ಕೋಟಿಯ (8 ಕಾಮಗಾರಿ) ಯೋಜನೆಗಳಿಗೆ ಮಾತ್ರ ಮಂಜೂರಾತಿ ನೀಡಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಎಲ್ಲ ಶಾಸಕರಿಗೂ ಸಮಾನವಾಗಿ ಹಂಚಿಕೆ ಮಾಡುವಂತೆ ಜಿಲ್ಲಾ ಉಸ್ತವಾರಿ ಸಚಿವರು ಸೂಚಿಸಿದ್ದರೂ 2021–22 ನೇ ಸಾಲಿನಲ್ಲಿಯೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿಲ್ಲವೆಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ, 2022–23ನೇ ಸಾಲಿನ ಮ್ಯಾಕ್ರೋ ಅನುದಾನದಲ್ಲಿ ಮಂಜೂರುಗೊಳಿಸಿದ ಕಾಮಗಾರಿಗಳನ್ನು ತಕ್ಷಣ ರದ್ದುಗೊಳಿಸಿ, ನಿಗದಿಪಡಿಸಿದ ಅನುದಾನ ₹ 105.26 ಕೋಟಿಯನ್ನು ಯಥಾವತ್ತಾಗಿ ಕಾಯ್ದಿರಿಸಬೇಕು. ಇದರಲ್ಲಿ ವ್ಯತ್ಯಾಸವಾದರೆ ಮಂಡಳಿಯೇ ಹೊಣೆ’ ಎಂದು ಪತ್ರದಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಯ ಟಿಪ್ಪಣಿಯಲ್ಲಿ ಏನಿದೆ?

* 2022–23ನೇ ಸಾಲಿನಲ್ಲಿ ಮ್ಯಾಕ್ರೊ ಅನುದಾನದಲ್ಲಿ ಜಿಲ್ಲಾ ಸಲಹಾ ಸಮಿತಿಯ ಅನುಮೋದನೆ ಇಲ್ಲದೆ ₹ 73.01 ಕೋಟಿಯ ಕಾಮಗಾರಿಗೆ ಮಂಡಳಿಯಿಂದಲೇ ಅನುಮೋದನೆ

* 2021–22ನೇ ಸಾಲಿನಲ್ಲಿ ಜಿಲ್ಲಾ ಸಲಹಾ ಸಮಿತಿ ಅನುಮೋದನೆ ನೀಡಿದ, ಸಚಿವ ಸಂಪುಟದಿಂದ ಅನುಮೋದನೆಗೊಂಡ ₹ 43.12 ಕೋಟಿಯ ಕಾಮಗಾರಿ ಹೊರತುಪಡಿಸಿ, ಉಳಿದ ₹ 61.64 ಕೋಟಿ ಕಾಮಗಾರಿಯನ್ನು ರದ್ದುಗೊಳಿಸಬೇಕು.

* ಕೋವಿಡ್‌ ನಿಯಂತ್ರಿಸಲು ಕೈಗೊಂಡ ₹ 15.26 ಕೋಟಿ ಕಾಮಗಾರಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲ.

* 2021–22 ನೇ ಸಾಲಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಟಾಟಾ ಟೆಕ್ನಾಲಾಜಿಸ್‌ ಲ್ಯಾಬ್‌ಗೆ ಸಂಬಂಧಿಸಿದ ₹ 12.63 ಕೋಟಿಯ ಕಾಮಗಾರಿಯ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆಗಾಗಿ ಪತ್ರ ವ್ಯವಹಾರ ಆಗಿಲ್ಲ

* ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಖರ್ಗೆ ಪೆಟ್ರೋಲ್‌ ಪಂಪ್‌ ಬಳಿ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಗೆ ₹ 52 ಲಕ್ಷಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆಯದೆ ಟೆಂಡರ್‌.

ಬಿಜೆಪಿ ಶಾಸಕರಿಂದಲೇ ವಿರೋಧ

ಶಾಲಾ ಕಾಲೇಜುಗಳಿಗೆ ಮೈಕ್ರೋ ಯೋಜನೆಯಡಿ ಮಂಡಳಿಯಿಂದಲೇ ಪೀಠೋಪಕರಣ ಪೂರೈಸುವುದಾಗಿ ಕೆಕೆಆರ್‌ಡಿಬಿ ಕಾರ್ಯದರ್ಶಿ ಸೂಚಿಸಿರುವುದು ಕಾನೂನುಬಾಹಿರ ಎಂದು ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ (ಸೇಡಂ) ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಅವಿನಾಶ ಜಾಧವ (ಚಿಂಚೋಳಿ), ಸುಭಾಷ ಗುತ್ತೇದಾರ (ಆಳಂದ), ಬಸವರಾಜ ಮತ್ತಿಮೂಡ (ಕಲಬುರಗಿ ಗ್ರಾಮೀಣ) ಸಹಿ ಹಾಕಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಏಜೆನ್ಸಿಗಳನ್ನು ಗುರುತಿಸುತ್ತಿದ್ದು, ಈ ಬಾರಿಯೂ ಅದೇ ರೀತಿ ಅವಕಾಶ ಮಾಡಿಕೊಡಬೇಕು ಎಂದೂ ಪತ್ರದಲ್ಲಿ ಒತ್ತಾಯಿಸಿದ್ದಾರೆ.

*****

ಜಿಲ್ಲಾ ಸಲಹಾ ಸಮಿತಿ ಸಲಹೆಗಳನ್ನಷ್ಟೆ ಕೊಡುತ್ತದೆ. ಮಂಜೂರಾದ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ ವೆಚ್ಚ ಮಾಡುವ ವಿಷಯದಲ್ಲಿ ಮಂಡಳಿ ತೀರ್ಮಾನ ಕೈಗೊಳ್ಳುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರವನ್ನು ಬರೆಯುತ್ತೇವೆ.

- ಆರ್‌. ವೆಂಕಟೇಶ್‌ ಕುಮಾರ್, ಕಾರ್ಯದರ್ಶಿ, ಕೆಕೆಆರ್‌ಡಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.