ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ನಮಾಜ್ ಮಾಡುತ್ತಿರುವ ದೃಶ್ಯ
ಎಕ್ಸ್ ಚಿತ್ರ
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಮುಸ್ಲಿಂ ಪ್ರಯಾಣಿಕರು ನಮಾಜ್ ಮಾಡಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಆಡಳತಾರೂಢ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
‘ಇದಕ್ಕೆ ಹೇಗೆ ಅವಕಾಶ ನೀಡಲಾಯಿತು...?’ ಎಂದು ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಅವರು ಕೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ ಹಾಗೂ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ಅನುಮತಿ ನೀಡಿದ್ದಾರಾ? ಎಂದೂ ಪ್ರಶ್ನಿಸಿದ್ದಾರೆ.
ಅತ್ಯಂತ ಭಿಗಿ ಭದ್ರತೆಯ ವಲಯದಲ್ಲಿ ಸಾಮೂಹಿಕ ನಮಾಜ್ ನಡೆಸಲು ಇವರು ಅನುಮತಿ ಪಡೆದಿದ್ದಾರೆಯೇ? ಆರ್‌ಎಸ್‌ಎಸ್ ಪಥ ಸಂಚಲನ ಆಯೋಜಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವ ರಾಜ್ಯ ಸರ್ಕಾರವು, ನಿರ್ಬಂಧಿತ ಪ್ರದೇಶದಲ್ಲಿ ನಮಾಜ್ ನಡೆಸುವಾಗ ಕುರುಡಾಗಿ ವರ್ತಿಸುತ್ತಿರುವುದೇಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಟುವಟಿಕೆ ನಡೆಸಲು ಸರ್ಕಾರದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಯೇ ಈ ಆದೇಶವನ್ನು ಸರ್ಕಾರ ಹೊರಡಿಸಿತು ಎಂದೇ ಹೇಳಲಾಗುತ್ತಿದೆ. ಆದರೆ ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸರ್ವಧರ್ಮ ಪ್ರಾರ್ಥನಾ ಮಂದಿರವಿದೆ. ಭದ್ರತಾ ತಪಾಸಣೆ ಪೂರ್ಣಗೊಂಡ ನಂತರ ಈ ಪ್ರಾರ್ಥನಾ ಮಂದಿರವನ್ನು ಬಳಸಲು ಅವಕಾಶವಿದೆ.
ಈ ದೃಶ್ಯವನ್ನು ಹಂಚಿಕೊಂಡಿರುವ ಹಲವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹಾಗೂ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.