ಬಿಜೆಪಿ ಟ್ವಿಟರ್ ಖಾತೆಯ ಚಿತ್ರ
ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಇಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ನಾಯಕರ ಪ್ರತಿಭಟನೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ‘ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಚಾರ್ಟೆಡ್ ಫ್ಲೈಟ್‌ನಲ್ಲಿ ಬೆಂಗಳೂರಿನಿಂದ ದೆಹಲಿಗೆ ಹೋಗಿರುವ ಸಿದ್ದರಾಮಯ್ಯ ಅವರು ಕಂಬಿ ಇಲ್ಲದೆ ಬುರುಡೆ ರೈಲು ಬಿಡುತ್ತಿದ್ದಾರೆ’ ಎಂದು ಲೇವಡಿ ಮಾಡಿದೆ.
‘ಸಿದ್ದರಾಮಯ್ಯ ಅವರೇ, ಶ್ಯಾಡೋ ಸಿಎಂ ಬರೆದುಕೊಟ್ಟ ಡಾಕ್ಟರ್ ಚೀಟಿಯ ಸುಳ್ಳು ಲೆಕ್ಕ ಬಿಡಿ. ಸರ್ಕಾರಿ ದಾಖಲೆಯಲ್ಲಿರುವ ಅಧಿಕೃತ ಪ್ರಧಾನಿ ಮೋದಿ ಅವರ ಅಸಲಿ ಲೆಕ್ಕ ನೋಡಿ. ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ₹60,779 ಕೋಟಿ ಮಾತ್ರ. ಕಳೆದ 10 ವರ್ಷದಲ್ಲಿ ಎನ್‌ಡಿಎ ನೇತೃತ್ವದ ಪ್ರಧಾನಿ ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ₹2,08,882 ಕೋಟಿಗೂ ಅಧಿಕ’ ಎಂದು ಬಿಜೆಪಿ ಟೀಕಿಸಿದೆ.
‘ಡೋಂಗಿವಾದಿ ಸಿದ್ದರಾಮಯ್ಯ ಅವರಿಗೆ ಹಸಿ ಹಸಿ ಸುಳ್ಳುಗಳನ್ನು ಹೇಳುವಾಗ ಸಿಗುವ ವಿಕೃತ ಆನಂದ, ಕಾರ್ಕೋಟಕ ಸತ್ಯವನ್ನು ಕೇಳುವುದರಲ್ಲಿ ಸಿಗುವುದಿಲ್ಲ. ಏಕೆಂದರೆ ಈ ಕಾಂಗ್ರೆಸ್ಸಿಗರಿಗೆ ಸತ್ಯ ಕಹಿ, ಸುಳ್ಳು ಅಮೃತ’ ಎಂದು ಬಿಜೆಪಿ ಕುಟುಕಿದೆ.
ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಕರ್ನಾಟಕವನ್ನು ಕಾಲಕಸದಂತೆ ಕಂಡಿತ್ತು ಕಾಂಗ್ರೆಸ್. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಕರ್ನಾಟಕಕ್ಕೆ ನ್ಯಾಯ ದೊರೆತಿದ್ದು ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರ ಬಂದ ನಂತರ. ಜಲಜೀವನ್ ಮಿಷನ್ ಸಂಪರ್ಕ, ವಿಮಾನ ನಿಲ್ದಾಣಗಳು, ಮೆಟ್ರೊ ಸಂಪರ್ಕ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಪ್ರಧಾನಿ ಮೋದಿ ಸರ್ಕಾರ ಕರ್ನಾಟಕದಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಬಿಜೆಪಿ ಹೇಳಿದೆ.
‘ಹೆದ್ದಾರಿ ನಿರ್ಮಾಣದಿಂದ ಹಿಡಿದು ರೈಲನ್ನು ಹಳಿಗೆ ತರುವವರೆಗೆ ಕರ್ನಾಟಕಕ್ಕೆ ಪ್ರಧಾನಿ ಮೋದಿ ಅವರ ಸರ್ಕಾರ ನೀಡಿದ ಕೊಡುಗೆ ಅಪರಿಮಿತ. 13,500 ಕಿಲೋಮೀಟರ್‌ನಷ್ಟು ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ ಮೋದಿ ಸರ್ಕಾರದ ಎದುರು, ತಮ್ಮ ಪಕ್ಷದ ಸರ್ಕಾರ ನೀಡಿದ 6,750 ಕಿ.ಮೀ ಕೊಡುಗೆ ಅತ್ಯಂತ ಕುಬ್ಜವಾಗಿ ಕಾಣುತ್ತದೆ ಎಂಬ ಸತ್ಯವನ್ನು ಚೆನ್ನಾಗಿ ತಿಳಿದಿರುವ ಸಿದ್ದರಾಮಯ್ಯ ಅವರು ಅದನ್ನು ಮರೆಮಾಚಲು ನಿತ್ಯವೂ ವಿನೂತನ ನಾಟಕಗಳನ್ನಾಡುತ್ತಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.