ADVERTISEMENT

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಬಿ.ಕೆ. ಹರಿಪ್ರಸಾದ್ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜನವರಿ 2022, 17:58 IST
Last Updated 26 ಜನವರಿ 2022, 17:58 IST
ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್    

ಬೆಂಗಳೂರು: ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ಬಿ.ಕೆ. ಹರಿಪ್ರಸಾದ್, ಉಪ ನಾಯಕರಾಗಿ ಕೆ. ಗೋವಿಂದರಾಜ್ ಹಾಗೂ ಮುಖ್ಯ ಸಚೇತಕರಾಗಿ ಪ್ರಕಾಶ್‌ ರಾಥೋಡ್‌ ಅವರನ್ನು ಕಾಂಗ್ರೆಸ್‌ ನೇಮಿಸಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ನೇಮಕ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್. ಪಾಟೀಲ ಮತ್ತು ಮುಖ್ಯ ಸಚೇತಕರಾಗಿದ್ದ ನಾರಾಯಣ ಸ್ವಾಮಿ ಅವರ ಅವಧಿ ಜ. 5ಕ್ಕೆ ಮುಕ್ತಾಯ ಆಗಿತ್ತು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಾಟೀಲ ಅವರಿಗೆ ಪಕ್ಷ ಟಿಕೆಟ್ ನೀಡಿರಲಿಲ್ಲ. ನಾರಾಯಣ ಸ್ವಾಮಿ ಮತ್ತೆ ಸ್ಪರ್ಧಿಸಲು ನಿರಾಕರಿಸಿದ್ದರು.

ಹರಿಪ್ರಸಾದ್‌ ಅವರು ಈಡಿಗ ಸಮುದಾಯಕ್ಕೆ ಸೇರಿದವರು. ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ ಕಾಂಗ್ರೆಸ್‌, ಇದೀಗ ಹಿಂದುಳಿದ ಸಮುದಾಯದ ಮೇಲೆ ತನ್ನ ಹಿಡಿತ ಬಲಪಡಿಸುವ ಉದ್ದೇಶದಿಂದ ಆ ವರ್ಗದ ನಾಯಕನಿಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.