
ಬೆಳಗಾವಿಯ ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳು
(ಸಂಗ್ರಹ ಚಿತ್ರ)
ನವದೆಹಲಿ: ಬೆಳಗಾವಿ ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಮೃತಪಟ್ಟಿರುವ ಬಗ್ಗೆ 15 ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರ ನಿರ್ದೇಶನ ನೀಡಿದೆ.
ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ವಾರ್ಡನ್ (ಪಿಸಿಸಿಎಫ್) ಅವರಿಗೆ ಬುಧವಾರ ಪತ್ರ ಬರೆದಿರುವ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ವಿ.ಕ್ಲೆಮೆಂಟ್ ಬೆನ್, ‘ಈ ಘಟನೆಯ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿ ಪ್ರಾಧಿಕಾರಕ್ಕೆ ದೂರು ಸಲ್ಲಿಕೆಯಾಗಿದೆ. ಹೀಗಾಗಿ, ಕೃಷ್ಣಮೃಗಗಳ ಸಾವಿನ ನೈಜ ಕಾರಣಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.
ಈ ಘಟನೆ ಬಗ್ಗೆ ಪ್ರಾಧಿಕಾರಕ್ಕೆ ಇದೇ 18ರಂದು ದೂರು ನೀಡಿದ್ದ ಪ್ರಮೋದ್ ಎಂ.ವಿ ಎಂಬುವರು, ‘ಗಳಲೆ ರೋಗದಿಂದ (ಇಂಡೀಡ್ ಹೆಮರೈಜಿಕ್ ಸೆಪ್ಟೀಸಿಮಿಯಾ) ಕೃಷ್ಣಮೃಗಗಳು ಸತ್ತಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ಆಗ್ರಹಿಸಿದ್ದರು.
‘ಕರ್ನಾಟಕದ ಬೇರೆ ಮೃಗಾಲಯಗಳಲ್ಲಿ ಆರೋಗ್ಯ ಸಲಹಾ ಸಮಿತಿ ಇದೆ. ಆದರೆ, ಇಲ್ಲಿನ ಮೃಗಾಲಯದಲ್ಲಿ ಈ ಸಮಿತಿಯನ್ನೇ ರಚಿಸಿಲ್ಲ. ಜತೆಗೆ, ಬ್ಯಾಕ್ಟಿರಿಯಾ ಸೋಂಕು ಹರಡಬಹುದು ಎಂದು ಬೆಂಗಳೂರಿನ ತಜ್ಞರು ಎರಡು ತಿಂಗಳ ಹಿಂದೆಯೇ ಮುನ್ನೆಚ್ಚರಿಕೆ ನೀಡಿದ್ದರು. ಇದನ್ನು ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ. ಗಂಭೀರ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.