ADVERTISEMENT

ಬಿಎಂಟಿಸಿ ದುಸ್ಥಿತಿಗೆ ತಂದಿಟ್ಟ ಸಾರಿಗೆ ಸಚಿವರನ್ನು ಸನ್ಮಾನಿಸಬೇಕೇ?: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2022, 10:00 IST
Last Updated 28 ಜೂನ್ 2022, 10:00 IST
ಬಿಎಂಟಿಸಿ
ಬಿಎಂಟಿಸಿ   

ಬೆಂಗಳೂರು: ಸಾಲದ ಸುಳಿಯಲ್ಲಿ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗ ಡೀಸೆಲ್‌ಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.

ಈ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ‘ರಾಜ್ಯದ ಸಾರಿಗೆ ವ್ಯವಸ್ಥೆಯ ಇತಿಹಾಸದಲ್ಲೇ ಡೀಸೆಲ್ ಇಲ್ಲದೆ ಬಸ್ಸುಗಳು ನಿಲ್ಲುವ ಸ್ಥಿತಿ ಒದಗಿದ್ದು ಇದೇ ಮೊದಲ ಬಾರಿ. ಬಿಎಂಟಿಸಿಯನ್ನು ದುಸ್ಥಿತಿಗೆ ತಂದಿಟ್ಟಿದ್ದಕ್ಕೆ ಸಾರಿಗೆ ಸಚಿವರನ್ನು ಸನ್ಮಾನಿಸಬೇಕೇ’ ಎಂದು ಪ್ರಶ್ನಿಸಿದೆ.

‘ತೈಲ ಕಂಪನಿಗಳ ಎದುರು ಹೆದರಿ ಕುಳಿತಿರುವ ಸರ್ಕಾರದ ಅಸಾಮರ್ಥ್ಯಕ್ಕೆ ಜನತೆ ಹಾಗೂ ಬಿಎಂಟಿಸಿ ಸಂಕಷ್ಟ ಎದುರಿಸಬೇಕಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ADVERTISEMENT

ಡಿಪೊಗಳಿಗೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್‌ಗಳ ಬಳಿ ಬಿಎಂಟಿಸಿ ಬಸ್‌ಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು.

‘ನಮ್ಮ ಡಿಪೊಗಳಲ್ಲಿನ ಬಂಕ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ಡೀಸೆಲ್‌ ಪೂರೈಸುತ್ತಿದ್ದ ವ್ಯಾಪಾರಿಗಳಿಗೆ ಕಂಪನಿಗಳು ಬೆದರಿಕೆ ಹಾಕುತ್ತಿವೆ. ಬಿಎಂಟಿಸಿಗೆ ಡೀಸೆಲ್ ಪೂರೈಸಿದರೆ ಪರವಾನಗಿ ರದ್ದುಪಡಿಸುವ ಬೆದರಿಕೆ ಹಾಕುತ್ತಿವೆ. ಇದರಿಂದಾಗಿ ವ್ಯಾಪಾರಿಗಳು ನಮಗೆ ಡೀಸೆಲ್ ಪೂರೈಸಲು ಹೆದರುತ್ತಿದ್ದಾರೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಹೇಳಿದ್ದರು.

ಎಚ್‌ಪಿಸಿಎಲ್‌ನಿಂದ ಇಂಧನ ಖರೀದಿಸುತ್ತಿದ್ದ ಬಿಎಂಟಿಸಿ, ₹70 ಕೋಟಿ ಬಾಕಿ ಉಳಿಸಿಕೊಂಡಿದೆ. ಇದಲ್ಲದೇ ಸಗಟು ಖರೀದಿ ದರ ಪ್ರತಿ ಲೀಟರ್‌ ಡೀಸೆಲ್‌ಗೆ ₹119 ಆಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ದರ ಲೀಟರ್‌ಗೆ ₹87 ಇದೆ. ಇದರಿಂದಾಗಿ ಬಿಎಂಟಿಸಿ, ಚಿಲ್ಲರೆ ವ್ಯಾಪಾರಿಗಳಿಂದಲೇ ಡೀಸೆಲ್ ಖರೀದಿಸಿ ಬಸ್‌ಗಳ ಸಂಚಾರವನ್ನು ಸುಗಮ ಮಾಡಿಕೊಂಡಿತ್ತು. ಚಿಲ್ಲರೆ ವ್ಯಾಪಾರಿಗಳೇ ಟ್ಯಾಂಕರ್‌ಗಳಲ್ಲಿ ಪ್ರತಿದಿನ ಸಂಸ್ಥೆಗಳ ಡಿಪೊಗಳಲ್ಲಿರುವ ಬಂಕ್‌ಗಳಿಗೆ ಪೂರೈಕೆ ಮಾಡುತ್ತಿದ್ದರು. ಅಂದಿನ ಡೀಸೆಲ್ ಮೊತ್ತವನ್ನು ಅಂದೇ ಪಾವತಿಸಿ ಬಿಎಂಟಿಸಿ ಕೈತೊಳೆದುಕೊಳ್ಳುತ್ತಿತ್ತು. ಈ ಪ್ರಕ್ರಿಯೆ ಎರಡು ತಿಂಗಳಿಂದ ನಡೆದುಕೊಂಡು ಬಂದಿದೆ.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.