ಪಡಿತರ ಚೀಟಿ (ಸಾಂಕೇತಿಕ ಚಿತ್ರ)
ಬೆಂಗಳೂರು: ಕರ್ನಾಟಕದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಚೀಟಿಗಳಿವೆ ಎಂದು ಗುರುತಿಸಿರುವ ಕೇಂದ್ರ ಸರ್ಕಾರ, ಅಂತಹ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವಂತೆ ಸೂಚನೆ ನೀಡಿದೆ. ಕೇಂದ್ರದ ಸೂಚನೆಯಂತೆ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸರ್ಕಾರದ ಮಾನದಂಡಗಳ ಅನುಸಾರ ₹1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ಬಿಪಿಎಲ್ ಪಡಿತರಚೀಟಿ ಹೊಂದಲು ಅನರ್ಹರು. ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ವರದಿ ಪ್ರಕಾರ ಕರ್ನಾಟಕದಲ್ಲಿ ಅಂತಹ 5.80 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ, ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ ಗುರುತಿಸಿರುವ ಪ್ರಕಾರ ಅಂತಹ ಫಲಾನುಭವಿಗಳ ಸಂಖ್ಯೆ 10.09 ಲಕ್ಷ ಎಂದು ಆಹಾರ ಇಲಾಖೆ ತಿಳಿಸಿದೆ.
ಕುಟುಂಬದಲ್ಲೊಬ್ಬರು ಆದಾಯ ತೆರಿಗೆ ಪಾವತಿದಾರರು, ಕಂಪನಿಗಳಲ್ಲಿ ನಿರ್ದೇಶಕರು, ನಾಲ್ಕು ಚಕ್ರಗಳ ವಾಹನ ಹೊಂದಿದವರು, ಜಿಎಸ್‌ಟಿ ನಂಬರ್ ಹೊಂದಿರುವ ಒಟ್ಟು ₹25 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರು. ಅಂತಹ ಶಂಕಾಸ್ಪದ ಫಲಾನು ಭವಿಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಅಂಥವರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸೆ. 30ರ ಒಳಗೆ ರದ್ದು ಪಡಿಸುವಂತೆ ಎಲ್ಲ ರಾಜ್ಯಗಳಿಗೆ ಇತ್ತೀಚೆಗೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ಸೂಚನೆಯ ಬೆನ್ನಲ್ಲೆ, ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರುವ ಫಲಾನುಭವಿಗಳು ಹೊಂದಿರುವ ಪಡಿತರಚೀಟಿಗಳನ್ನು ರದ್ದುಪಡಿಸಲು ಮುಂದಡಿ ಇಟ್ಟಿರುವ ರಾಜ್ಯ ಸರ್ಕಾರ, ತಹಶೀಲ್ದಾರ್‌ಗಳ ಮೂಲಕ ತಿಳಿವಳಿಕೆ ನೋಟಿಸ್ ನೀಡಲು ಆರಂಭಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಐದು ಗ್ಯಾರಂಟಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನೆ ಸಭೆಗೆ ಆಹಾರ ಇಲಾಖೆ ‘ಅನ್ನಭಾಗ್ಯ ಗ್ಯಾರಂಟಿ’ ಯೋಜನೆಯ ಸಮಗ್ರ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಗುರುತಿಸಿದ ಶಂಕಾಸ್ಪದ ಪಡಿತರ ಚೀಟಿಗಳ ವಿಧಗಳು ಹಾಗೂ ಫಲಾನುಭವಿಗಳ ಸಂಖ್ಯೆ ಮತ್ತು ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ದಿಂದ ಗುರುತಿಸಿರುವ ಅನರ್ಹ ಪಡಿತರ ಚೀಟಿಗಳ ವಿವರಗಳು ಅದರಲ್ಲಿದೆ.
‘ಕುಟುಂಬ ತಂತ್ರಾಂಶ’ವು ರಾಜ್ಯದಲ್ಲಿ ಒಟ್ಟು 13,87,651 ಬಿಪಿಎಲ್ ಪಡಿತರ ಚೀಟಿಗಳು ಅನರ್ಹವೆಂದು ಗುರುತಿಸಿದೆ. ಅದರಲ್ಲಿ 3,65,614 ಕಾರ್ಡ್‌ಗಳನ್ನು ಸರ್ಕಾರ ಅಮಾನತು, ರದ್ದು, ಎಪಿಎಲ್‌ಗೆ ಬದಲಾವಣೆ ಮಾಡಿತ್ತು. ಆದರೆ, ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ, ಆ ಪೈಕಿ 3,52,425 ಪಡಿತರ ಚೀಟಿಗಳನ್ನು ಸರ್ಕಾರದ ಆದೇಶದಂತೆ ಬಿಪಿಎಲ್ ಆಗಿ ಮರು ಸ್ಥಾಪಿಸಲಾಗಿತ್ತು.
ಪ್ರತಿ ತಿಂಗಳು ₹535 ಕೋಟಿ ವೆಚ್ಚ: ‘ಅನ್ನ ಭಾಗ್ಯ’ ಗ್ಯಾರಂಟಿ ಯೋಜನೆ ಯಡಿ ಪ್ರತಿ ತಿಂಗಳು 4.46 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2.15 ಲಕ್ಷ ಟನ್ ಅಕ್ಕಿ ಹಂಚಿಕೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಪ್ರತಿ ತಿಂಗಳು ₹535 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿರುವ ಪಡಿತರಚೀಟಿಗಳಿಗೆ ಕೇಂದ್ರ ಸರ್ಕಾರ ದಿಂದ ಪ್ರತಿ ತಿಂಗಳು 2.17 ಲಕ್ಷ ಟನ್ ಆಹಾರಧಾನ್ಯ ಹಂಚಿಕೆ ಆಗುತ್ತಿದೆ. ರಾಜ್ಯ ಸರ್ಕಾರದ ಬಿಪಿಎಲ್ ಪಡಿತರಚೀಟಿಗಳಿಗೆ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಪ್ರತಿ ತಿಂಗಳು 20 ಸಾವಿರ ಟನ್ ಆಹಾರಧಾನ್ಯ ಖರೀದಿಸಿ ಹಂಚ ಲಾಗುತ್ತದೆ. ಈ ಯೋಜನೆಯಡಿ ಪ್ರತಿ ತಿಂಗಳು ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತೇತರ ಕುಟುಂಬ ಗಳ (ಬಿಪಿಎಲ್) ಫಲಾನುಭವಿಗಳಿಗೆ ತಲಾ 5 ಕೆ.ಜಿ ಅಕ್ಕಿ ಹಂಚಿಕೆ ಮಾಡಲಾ ಗುತ್ತದೆ ಎಂದೂ ಮೂಲಗಳು ಹೇಳಿವೆ.
ರಾಜ್ಯದಲ್ಲಿ ಪಡಿತರ ಚೀಟಿ ಚಿತ್ರಣ
1,53,60,161: ರಾಜ್ಯದಲ್ಲಿರುವ ಒಟ್ಟು ಪಡಿತರ ಚೀಟಿ
5,41,44,507: ರಾಜ್ಯದಲ್ಲಿರುವ ಪಡಿತರ ಚೀಟಿಗಳಲ್ಲಿರುವ ಒಟ್ಟು ಸದಸ್ಯರು
4,01,93,130: ರಾಜ್ಯಕ್ಕೆ ಕೇಂದ್ರ ನಿಗದಿಪಡಿಸಿರುವ ಫಲಾನುಭವಿಗಳ ಗರಿಷ್ಠ ಮಿತಿ
ಇಂದು ನಿರ್ಧಾರ
ರಾಜ್ಯದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರಚೀಟಿ ಗಳಿರುವ ಬಗ್ಗೆ ಕೇಂದ್ರ ಸರ್ಕಾರದಿಂದ ಪಟ್ಟಿ ಬಂದಿದೆ. ಕೇಂದ್ರದ ಮಾನದಂಡದಂತೆ ನಾವು ಕ್ರಮ ತೆಗೆದುಕೊಳ್ಳಲೇ ಬೇಕಿದೆ. ಈ ಬಗ್ಗೆ ಚರ್ಚಿಸಲು ಸೋಮವಾರ (ಸೆ. 15) ಸಭೆ ನಡೆಸಲಿದ್ದೇವೆ. ಏನು ಮಾಡಬೇಕೆಂದು ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಸ್ವಲ್ಪ ಕಷ್ಟವಿದೆ. ಯೋಚನೆ ಮಾಡಿ ಮಾಡಬೇಕಿದೆ. ರಾಜ್ಯ ಸರ್ಕಾರ ಗುರುತಿಸಿದ ಅನರ್ಹ ಪಡಿತರಚೀಟಿಗಳನ್ನು ರದ್ದುಪಡಿಸುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ.– ಕೆ.ಎಚ್. ಮುನಿಯಪ್ಪ, ಆಹಾರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.