ADVERTISEMENT

ಸೇತುವೆಗಳ ಪುನರ್‌ನಿರ್ಮಾಣಕ್ಕೆ ₹2,000 ಕೋಟಿ; ಇಲ್ಲಿದೆ ಪ್ರಮುಖ ತೀರ್ಮಾನಗಳು

*ಕನಕಪುರ ವೈದ್ಯ ಕಾಲೇಜಿಗೆ ₹550 ಕೋಟಿ *11 ಶ್ರಮಿಕ ವಸತಿ ಶಾಲೆಗೆ ₹405 ಕೋಟಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 0:30 IST
Last Updated 10 ಅಕ್ಟೋಬರ್ 2025, 0:30 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ₹2,000 ಕೋಟಿ ಅಂದಾಜು ವೆಚ್ಚದಲ್ಲಿ ಸೇತುವೆಗಳ ಪುನರ್‌ನಿರ್ಮಾಣ ಮತ್ತು ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಸ್ತಾವಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಮೊದಲ ಹಂತದಲ್ಲಿ 39 ಬೃಹತ್ ಸೇತುವೆಗಳ ಪುನರ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಇದಕ್ಕೆ ₹1,000 ಕೋಟಿ ವೆಚ್ಚವಾಗಲಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪಿಆರ್‌ಎಎಂಸಿ ಅಧ್ಯಯನದಲ್ಲಿ ಗುರುತಿಸಿರುವ ಮತ್ತು ಪ್ರಮುಖ ಸೇತುವೆಗಳ ಪುನರ್‌ ನಿರ್ಮಾಣ ಮತ್ತು ಪುನಶ್ಚೇತನದ ಅಗತ್ಯವಿದೆ. ಮಳೆ–ಪ್ರವಾಹದಿಂದ ಹಾನಿಗೊಳಗಾದ ಸೇತುವೆಗಳು, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸಂಪರ್ಕ ರಹಿತ ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಕಾಲುಸಂಕ ನಿರ್ಮಿಸಲೂ ಒಪ್ಪಿಗೆ ನೀಡಲಾಗಿದೆ ಎಂದರು.

ಪ್ರಮುಖ ತೀರ್ಮಾನಗಳು

*ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ಕಾಲೇಜು ಕಟ್ಟಡ, ಹಾಸ್ಟೆಲ್‌ಗಳು, ವಸತಿ ಗೃಹಗಳು ಮತ್ತು ಇತರ ಸೌಲಭ್ಯಗಳ ಕಾಮಗಾರಿಗೆ ₹550 ಕೋಟಿ ಬೇಕಿದ್ದು, ಈ ಮೊತ್ತವನ್ನು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಭರಿಸಲು ಅನುಮೋದನೆ

*ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ ₹405.55 ಕೋಟಿ ವೆಚ್ಚದಲ್ಲಿ 11 ಶ್ರಮಿಕ ವಸತಿ ಶಾಲೆಗಳ ಸ್ಥಾಪನೆ

*ಕಾರ್ಮಿಕರ ಕಲ್ಯಾಣ ನಿಧಿಗೆ ವಂತಿಗೆ ಮೊತ್ತವನ್ನು ಸಕಾಲದಲ್ಲಿ ಮತ್ತು ಶೀಘ್ರದಲ್ಲಿ ಜಮೆ ಮಾಡುವುದಕ್ಕೆ ಪೂರಕವಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ಮಸೂದೆಗೆ ಒಪ್ಪಿಗೆ

*₹90.07 ಕೋಟಿ ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ‘ದಿಬ್ಬದಿಂದ–ಕಣಿವೆ ಜಲಾನಯನ’ ಕಾರ್ಯಕ್ರಮವನ್ನು ರಾಜ್ಯದ ಆಯ್ದ 15 ತಾಲ್ಲೂಕುಗಳಲ್ಲಿ 39,413 ಹೆಕ್ಟೇರ್‌ ಪ್ರದೇಶದಲ್ಲಿ ಜಾರಿಗೆ ಅನುಮೋದನೆ

*ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿರುವ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ನವೀಕರಿಸಲು ಮತ್ತು ಸೈಬರ್‌ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶಕ್ಕಾಗಿ ₹38.33 ಕೋಟಿ ವೆಚ್ಚದಲ್ಲಿ ಹೊಸ ತಂತ್ರಾಂಶ ಅಳವಡಿಸಲು ಒಪ್ಪಿಗೆ

*5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ಇದೇ ನವೆಂಬರ್‌ವರೆಗೆ ವಿಸ್ತರಿಸಲು ಒಪ್ಪಿಗೆ

*ಕೇಂದ್ರ ಪುರಸ್ಕೃತ ಐಸಿಜೆಎಸ್‌–2.0 ಯೋಜನೆಯಡಿ ಕೇಂದ್ರದ ಗೃಹ ಮಂತ್ರಾಲಯ ಮಂಜೂರು ಮಾಡಿರುವ ₹89.22 ಕೋಟಿಯಲ್ಲಿ ಪೊಲೀಸ್‌ ಗಣಕ ವಿಭಾಗದ ವತಿಯಿಂದ ಉಪಕರಣಗಳನ್ನು ಖರೀದಿಸಲು ಮತ್ತು ತರಬೇತಿ ಕೈಗೊಳ್ಳಲು ಅನುಮೋದನೆ

*ಬೀದರ್‌ ಜಿಲ್ಲೆ ಔರಾದ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು  ಒಪ್ಪಿಗೆ

*ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ತಡೆಗಟ್ಟುವ ಉದ್ದೇಶದಿಂದ 52–54 ಮೀಟರ್‌ ಎತ್ತರಕ್ಕೆ ತಲುಪಬಲ್ಲ ಒಂದು ಏರಿಯಲ್‌ ಲ್ಯಾಡರ್‌ ಪ್ಲಾಟ್‌ ಫಾರಂ ವಾಹನ ಖರೀದಿಗೆ ₹16 ಕೋಟಿ

*ಮಂಗಳೂರು ತಾಲ್ಲೂಕಿನ ದೇರೆಬೈಲ್‌ನ ಬ್ಲೂಬೆರಿ ಹಿಲ್ಸ್‌ ರಸ್ತೆಯ ಸರ್ವೇ ಸಂಖ್ಯೆ 129 ಮತ್ತು 113 ರಲ್ಲಿನ 3.285 ಎಕರೆ ಭೂಮಿಯಲ್ಲಿ ‘ವಾಣಿಜ್ಯ ಕಚೇರಿ ಟೆಕ್‌ ಪಾರ್ಕ್‌’ ಅಭಿವೃದ್ಧಿಪಡಿಸಲು ಒಪ್ಪಿಗೆ

*ಮೈಸೂರು ನಗರದ ಸಿಪಿಸಿ ಪಾಲಿಟೆಕ್ನಿಕ್‌ ಸಂಸ್ಥೆಯ ಪಾರಂಪರಿಕ ಕಟ್ಟಡದ ನವೀಕರಣ ಹಾಗೂ ಹೊಸ ಪೂರಕ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ₹70 ಕೋಟಿಯಲ್ಲಿ ಕೈಗೊಳ್ಳಲಾಗುವುದು. ಇದರಲ್ಲಿ ₹10 ಕೋಟಿ  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಭರಿಸಲಾಗುವುದು. ₹60 ಕೋಟಿಯನ್ನು ಬಜೆಟ್‌ನಿಂದ ಒದಗಿಸಲಾಗುವ ಅನುದಾನದಿಂದ ಹಂತ ಹಂತವಾಗಿ ಭರಿಸಲಾಗುವುದು

*ಚಿಂತಾಮಣಿ ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಯ ಕಟ್ಟಡ ನವೀಕರಣ ಹಾಗೂ ಆಡಿಟೋರಿಯಂ ಸೇರಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳಿಗೆ ₹50 ಕೋಟಿ. ಇದಕ್ಕೆ ಪರೀಕ್ಷಾ ಪ್ರಾಧಿಕಾರ ₹10 ಕೋಟಿ ಭರಿಸಲಿದೆ. ₹40 ಕೋಟಿ ಬಜೆಟ್‌ನಲ್ಲಿ ಒದಗಿಸಿದ ಅನುದಾನ ಬಳಸಿಕೊಳ್ಳಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.