ಬೆಂಗಳೂರು: ಜೆಡಿಎಸ್ ಪಕ್ಷವು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ‘ಭಾರತ್ ರಾಷ್ಟ್ರ ಸಮಿತಿ’ (ಬಿಆರ್‌ಎಸ್) ಪಕ್ಷದ ಜತೆಗೂಡಿ ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಎದುರಿಸಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ತಮ್ಮ ಪಕ್ಷದ ಎಲ್ಲ ಶಾಸಕರೊಂದಿಗೆ ಹೈದರಾಬಾದ್‌ಗೆ ತೆರಳಿದ್ದ ಅವರು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷವನ್ನು ‘ಭಾರತ್ ರಾಷ್ಟ್ರ ಸಮಿತಿ’ ಎಂಬ ಹೆಸರಿನಡಿ ರಾಷ್ಟ್ರೀಯ ಪಕ್ಷವನ್ನಾಗಿ ಘೋಷಿಸಲು ಬುಧವಾರ ಅಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿಗೆ ಹಿಂದಿರುಗುವ ಮುನ್ನ ಸುದ್ದಿಗಾರರ ಜತೆ ಅವರು ಮಾತನಾಡಿದರು.
‘ಜೆಡಿಎಸ್ ಮತ್ತು ಬಿಆರ್‌ಎಸ್ ಮಿತ್ರಪಕ್ಷಗಳಾಗಿ ಕೆಲಸ ಮಾಡಲಿವೆ. ಎಡಿಎಸ್ ಮತ್ತು ಟಿಆರ್‌ಎಸ್ ಮೊದಲಿನಿಂದಲೂ ಸಹಜ ಮಿತ್ರ ಪಕ್ಷಗಳಾಗಿದ್ದವು. ಈಗ ಬಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿರುವುದನ್ನು ಸ್ವಾಗತಿಸುತ್ತೇವೆ. ಚಂದ್ರಶೇಖರ ರಾವ್ ಅವರೊಂದಿಗೆ ಜತೆಗೂಡಿ ಕೆಲಸ ಮಾಡುತ್ತೇವೆ’ ಎಂದರು.
‘2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಕ್ತ ರಾಜಕೀಯ ವಾತಾವರಣ ಇದೆ. ಅದೇ ಸ್ಥಿತಿಯನ್ನು ನಿರ್ಮಾಣ ಮಾಡಲು ನಾನು ಮತ್ತು ಚಂದ್ರಶೇಖರ ರಾವ್ ನಿರ್ಧರಿಸಿದ್ದೇವೆ’ ಎಂದು ಕುಮಾರಸ್ವಾಮಿ ಹೇಳಿದರು.
‘ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಇನ್ನೂ ಹಲವು ಪಕ್ಷಗಳ ನಾಯಕರು ಬಿಆರ್‌ಎಸ್ ಜತೆ ಕೈಜೋಡಿಸುವ ವಿಶ್ವಾಸವಿದೆ. ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ, ಕಾಂಗ್ರೆಸ್ ಹೊರತಾದ ಪೂರ್ಣ ಬಹುಮತದ ಸರ್ಕಾರದ ರಚನೆಯ ದಿಕ್ಕಿನಲ್ಲಿ ಜೆಡಿಎಸ್– ಬಿಆರ್‌ಎಸ್ ದೃಢವಾಗಿ ಕೆಲಸ ಮಾಡಲಿವೆ’ ಎಂದು ತಿಳಿಸಿದರು.
2023 ರ ಚುನಾವಣೆ ಫಲಿತಾಂಶ ಜೆಡಿಎಸ್ ಪರವಾಗಿ ಬಂದರೆ, ಅದು 2024ರ ಲೋಕಸಭೆ ಚುನಾವಣೆಗೆ ಹೊಸ ದಿಕ್ಸೂಚಿಯಾಗಲಿದೆ. ಕರ್ನಾಟಕವು ರಾಷ್ಟ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ. ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯ ಇತ್ತು. ಕೆಲವೇ ಪಕ್ಷಗಳ ರಾಜಕೀಯ ಏಕಸ್ವಾಮ್ಯಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಹೊಸ ರಾಜಕೀಯ ಶಕ್ತಿ ಬೇಕಿತ್ತು. ಬಿಆರ್‌ಎಸ್ ಒಂದು ಪ್ರಬಲ ಪರ್ಯಾಯ ಎನ್ನುವುದು ತಮ್ಮ ಭಾವನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.