ADVERTISEMENT

ಉಪ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷಗಳ ಕಸರತ್ತು

ಹಾನಗಲ್: ಜೆಡಿಎಸ್‌ನಿಂದ ನಯಾಜ್‌* ಸಿಂದಗಿ: ಕಾಂಗ್ರೆಸ್‌ನಿಂದ ಅಶೋಕ್ ಮನಗೂಳಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 4:04 IST
Last Updated 29 ಸೆಪ್ಟೆಂಬರ್ 2021, 4:04 IST
   

ಬೆಂಗಳೂರು: ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿ
ದ್ದಂತೆ ಮೂರು ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲುವಿಗಾಗಿ ಕಸರತ್ತು ಆರಂಭಿಸಿವೆ.

ಸಿ.ಎಂ.ಉದಾಸಿ ಅವರ ನಿಧನದಿಂದ ಹಾನಗಲ್‌ ಮತ್ತು ಎಂ.ಸಿ.ಮನಗೂಳಿ ಅವರ ನಿಧನದಿಂದ ಸಿಂದಗಿ ಕ್ಷೇತ್ರಗಳು ತೆರವಾಗಿದ್ದವು. ಎರಡೂ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್‌ ಜಿದ್ದಾಜಿದ್ದಿ ಪೈಪೋಟಿ ನಡೆಸಿದ್ದರೆ, ಸಿಂದಗಿ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಜೆಡಿಎಸ್‌ ಕಸರತ್ತು ಆರಂಭಿಸಿದೆ.

ಬಿಜೆಪಿ ಈ ಎರಡೂ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

ADVERTISEMENT

ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಲು ಸಿ.ಎಂ.ಉದಾಸಿ ಅವರ ಪುತ್ರ ಶಿವಕುಮಾರ್‌ ಉದಾಸಿಗೆ ಆಸಕ್ತಿ ಇದ್ದರೂ, ಲೋಕಸಭಾ ಸದಸ್ಯರಾಗಿರುವುದರಿಂದ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ನಯಾಜ್ ಅವರನ್ನು ಕಣಕ್ಕೆ ಇಳಿಸುವುದಾಗಿ ಜೆಡಿಎಸ್ ಘೋಷಿಸಿದೆ.

ಹಾನಗಲ್‌ ಕ್ಷೇತ್ರಕ್ಕೆ ಕಾಂಗ್ರೆಸ್‌ ಇನ್ನೂ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆದರೆ, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. 2018ರ ಚುನಾವಣೆ ಸಂದರ್ಭದಲ್ಲಿ ಹಾಲಿ ಶಾಸಕರಾಗಿದ್ದರೂ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ, ಪ್ರಕಾಶಗೌಡ ಪಾಟೀಲ ಸೇರಿದಂತೆ ಇನ್ನೂ ಕೆಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಸಿಂಧಗಿಯಲ್ಲಿ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿದ್ದು, ಅವರನ್ನೇ ಕಣಕ್ಕಿಳಿಸುವುದಾಗಿ ಆ ಪಕ್ಷ ಘೋಷಿಸಿದೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದ ರಮೇಶ ಭೂಸನೂರಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಸಾಮೂಹಿಕ ನಾಯಕತ್ವ:ಬೊಮ್ಮಾಯಿ

‘ಈ ಉಪಚುನಾವಣೆ ನನ್ನ ನೇತೃತ್ವದಲ್ಲಿ ಎನ್ನುವುದಕ್ಕಿಂತ ಎಲ್ಲ ನಾಯಕರೂ ಒಟ್ಟುಗೂಡಿ ಎದುರಿಸಿ ಗೆಲ್ಲುತ್ತೇವೆ’ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಅಭಿಪ್ರಾಯ ಸಂಗ್ರಹಕ್ಕೆ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ವೀಕ್ಷಕರನ್ನು ಕಳುಹಿಸಲಿದ್ದಾರೆ.ದಾವಣಗೆರೆಯಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ಆಗಿದೆ. ಎರಡೂ ಕ್ಷೇತ್ರಗಳ ಸ್ಥಿತಿ ಗತಿಗಳಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದ್ದಾರೆ. ರಾಜ್ಯದ ಜನರು ನಮ್ಮ ಜತೆ ಇದ್ದಾರೆ. ಪಕ್ಷದ ಸಂಘಟನೆ ಗಟ್ಟಿಯಾಗಿದೆ. ಕಾರ್ಯಕರ್ತರೇ ಪಕ್ಷದ ಬಲ’ ಎಂದರು.

***

ಹಾನಗಲ್‌ನಲ್ಲಿ ಕಳೆದ ಬಾರಿ ಸೋತವರು ಚುನಾವಣೆ ನಂತರವೂ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಅಭ್ಯರ್ಥಿಯ ಅಂತಿಮ ಆಯ್ಕೆ ಯನ್ನು ಹೈಕಮಾಂಡ್‌ ಮಾಡುತ್ತದೆ.

ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಸಿಂದಗಿ ಕ್ಷೇತ್ರದಲ್ಲಿ ನಾಲ್ಕೈದು ಮಂದಿ ಟಿಕೆಟ್ ಆಕಾಂಕ್ಷಿಗಳು‌ ಇದ್ದಾರೆ. ಈ ಬಗ್ಗೆ ಅಲ್ಲಿನ ಕಾರ್ಯಕರ್ತರ ಜೊತೆ ಚರ್ಚಿಸಿದ್ದು, ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ.

ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.