ADVERTISEMENT

ಉಪಚುನಾವಣೆ: ಶಿರಾದಲ್ಲಿ ಉತ್ಸಾಹ, ಆರ್‌.ಆರ್‌.ನಗರದಲ್ಲಿ ನಿರುತ್ಸಾಹ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 18:12 IST
Last Updated 3 ನವೆಂಬರ್ 2020, 18:12 IST
ರಾಜರಾಜೇಶ್ವರಿ ನಗರ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಮಂಗಳವಾರ ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಇಂಗ್ಲೀಷ್ ಸ್ಕೂಲ್ ನಲ್ಲಿ ಮತದಾರರು ಮತಚಲಾಯಿಸಿದರು -ಪ್ರಜಾವಾಣಿ ಚಿತ್ರ
ರಾಜರಾಜೇಶ್ವರಿ ನಗರ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಮಂಗಳವಾರ ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಇಂಗ್ಲೀಷ್ ಸ್ಕೂಲ್ ನಲ್ಲಿ ಮತದಾರರು ಮತಚಲಾಯಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶೇ 84.54 ಮತ್ತು ಬೆಂಗಳೂರಿನ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ 45.24ರಷ್ಟು ಮಂಗಳ
ವಾರ ಮತದಾನವಾಗಿದೆ.

ಶಿರಾದಲ್ಲಿ ಆರಂಭದಿಂದಲೂ ಅತ್ಯಂತ ಉತ್ಸಾಹದಿಂದ ಮತದಾನ ನಡೆದರೆ, ಆರ್‌.ಆರ್‌.ನಗರದಲ್ಲಿ ನೀರಸ ಮತದಾನವಾಗಿದೆ. ಸಣ್ಣ–ಪುಟ್ಟ ಘಟನೆಗಳನ್ನು ಬಿಟ್ಟರೆ, ಮತದಾನ ಬಹುತೇಕ ಶಾಂತವಾಗಿತ್ತು. ಇದೀಗ ಮೂರು ಪಕ್ಷಗಳು ಮತದಾನದ ಪ್ರಮಾಣದ ಆಧಾರದಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ.

ಆರ್‌.ಆರ್‌.ನಗರದಲ್ಲಿ 2013ರಿಂದ ಈಚೆಗೆ ನಡೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಹೋಲಿಸಿದರೆ ಕ್ಷೇತ್ರ
ದಲ್ಲಿ ಈ ಬಾರಿ ಅತಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಸರಾಸರಿ ಶೇ 53ರಿಂದ ಶೇ 56.80ರಷ್ಟು ಮತದಾನ ಆಗುತ್ತಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.

ADVERTISEMENT

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಅತಿ ಹೆಚ್ಚು ಎಂದರೆ ಶೇ 84.31ರಷ್ಟು ಮತದಾನವಾಗಿತ್ತು. ಈ ಉಪಚುನಾವಣೆ ಆ ದಾಖಲೆ
ಯನ್ನು ಮೀರಿಸಿದ್ದು, ಶೇ 84.54ರಷ್ಟು ಮತದಾನವಾಗಿದೆ. ಅಂತಿಮ ವರದಿ ಬಂದ ಬಳಿಕ ಅದರ ಪ್ರಮಾಣ ಇನ್ನೂ ಹೆಚ್ಚಬಹುದು.

ಶಿರಾದ ಸರ್ಕಾರಿ ವಿಜ್ಞಾನ ಪ್ರಥಮದರ್ಜೆ ಕಾಲೇಜಿನ ಮತಗಟ್ಟೆ ಬಳಿ ಮತರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಪೊಲೀಸರು ಕೇಸರಿ ಬಣ್ಣದ ಮಾಸ್ಕ್ ಧರಿಸಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅವರಿಗೆ ನೀಲಿ ಮಾಸ್ಕ್‌ ನೀಡಲಾಯಿತು. ಕಾಂಗ್ರೆಸ್‌ –ಬಿಜೆಪಿ ಕಾರ್ಯಕರ್ತರ ಮಧ್ಯೆ ಅಲ್ಲಲ್ಲಿ ನೂಕಾಟ–ತಳ್ಳಾಟ ನಡೆಯಿತು.

ಕೊರೊನಾ ಸೋಂಕಿನ ಕಾರಣ ಎಲ್ಲ ಮತಗಟ್ಟೆಗಳಲ್ಲೂ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬ ಮತದಾರನನ್ನೂ ಥರ್ಮಲ್‌ ಸ್ಕ್ಯಾನರ್‌ ಮೂಲಕ ದೇಹದ ಉಷ್ಣಾಂಶವನ್ನು ಪರೀಕ್ಷಿಸಿದ, ಸ್ಯಾನಿಟೈಸರ್‌ ಮೂಲಕ ಕೈ ಸ್ವಚ್ಛಗೊಳಿಸಿ ಬಳಿಕವಷ್ಟೇ ಮತದಾನಕ್ಕೆ ಅವಕಾಶ ನೀಡಲಾಯಿತು. ಎಲ್ಲ ಮತದಾರರಿಗೂ ರಬ್ಬರ್‌ ಕೈಗವುಸು ವಿತರಿಸಲಾಯಿತು. ಅದನ್ನು ಧರಿಸಿ ಮತದಾನ ಮಾಡಲು ಸೂಚಿಸಲಾಯಿತು. ಶಿರಾದಲ್ಲಿ 38 ಮಂದಿ ಕೋವಿಡ್‌ ರೋಗಿಗಳು ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.