
ಬಿ.ವೈ.ವಿಜಯೇಂದ್ರ ಮತ್ತು ಪ್ರಿಯಾಂಕ್ ಖರ್ಗೆ
ಬೆಂಗಳೂರು: ಆರ್‌ಎಸ್‌ಎಸ್ ಕುರಿತು ಸದಾ ತಲೆಹರಟೆ ಮತ್ತು ಉಡಾಫೆ ಮಾತುಗಳನ್ನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು ನಾಗಪುರಕ್ಕೆ ಬಂದು ಆರು ತಿಂಗಳು ಆರ್‌ಎಸ್‌ಎಸ್ ಕುರಿತು ಅಧ್ಯಯನ ಮಾಡಿ, ಆ ಬಳಿಕ ಮಾತನಾಡಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಪ್ರಿಯಾಂಕ್‌ಗೆ ಆರ್‌ಎಸ್‌ಎಸ್ ವಿರುದ್ಧ ದ್ವೇಷ, ಹತಾಶೆ ಇರುವ ಕಾರಣ ಬಾಲಿಶತನದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ದಕ್ಷಿಣಕನ್ನಡ ಜಿಲ್ಲೆಯ ವಿರುದ್ಧ ಪ್ರಿಯಾಂಕ್ ಮಾತನಾಡಿದ್ದಾರೆ. ಆದರೆ, ಕಲಬುರಗಿ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ತೀರಾ ಹಿಂದುಳಿಯಲು ಖರ್ಗೆಗಳೇ ಕಾರಣರಲ್ಲವೇ? ಕಳೆದ 50 ವರ್ಷಗಳಿಂದ ಕಲಬುರಗಿ ಮಾತ್ರವಲ್ಲ ಇಡೀ ಕಲ್ಯಾಣ ಕರ್ನಾಟಕ ಇವರ ಕುಟುಂಬದ ಹಿಡಿತದಲ್ಲಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಸುದೀರ್ಘ ಅಧಿಕಾರ, ರಾಜಕೀಯ ಸ್ಥಾನಮಾನ ಅನುಭವಿಸುತ್ತಲೇ ಬಂದಿದ್ದಾರೆ. ರಾಜ್ಯದ 59 ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳೆಲ್ಲವೂ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲೇ ಇವೆ. ಶಿವಮೊಗ್ಗ ಬಗ್ಗೆಯೂ ಸವಾಲು ಹಾಕಿದ್ದಾರೆ. ಶಿವಮೊಗ್ಗ ಮತ್ತು ಕಲಬುರ್ಗಿ ಅಭಿವೃದ್ಧಿ ಚರ್ಚೆಗೂ ಸಿದ್ಧನಿದ್ದೇನೆ ಎಂದರು.
ಕಲಬುರಗಿಯಲ್ಲಿ 12 ದಿನಗಳಿಂದ 9 ಬಡಾವಣೆಗಳಲ್ಲಿ ಕುಡಿಯುವ ನೀರು ಬಂದಿಲ್ಲ. ಆ ಕಡೆ ಗಮನಹರಿಸಲು ಇವರಿಗೆ ಪುರುಸೊತ್ತಿಲ್ಲ. ಕಳೆದ ಎರಡೂವರೆ ವರ್ಷದಲ್ಲಿ ಜಿಲ್ಲಾ ಅಭಿವೃದ್ಧಿ ಸಭೆಯನ್ನೇ ಕರೆದಿಲ್ಲ. ಎಷ್ಟು ಕೆಡಿಪಿ ಸಭೆಗಳನ್ನು ಮಾಡಿದ್ದಾರೆ ಎಂಬ ಬೆಳಕು ಚೆಲ್ಲಲಿ. ಸದಾ ಅಪಪ್ರಚಾರ ಮಾಡುವುದರಲ್ಲೇ ತೊಡಗಿರುವ ಪ್ರಿಯಾಂಕ್ ತಮ್ಮ ಜಿಲ್ಲೆಯ ಸಮಸ್ಯೆಗಳಿಗೆ ಗಮನಹರಿಸಲು ಸಮಯವಿಲ್ಲ ಎಂದು ಅವರು ಕಿಡಿಕಾರಿದರು.
ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ಧೈರ್ಯ ಇಲ್ಲ. ಪುಗ್ಸಟೆ ಮಾತನಾಡುತ್ತಾರೆ ಎಂದು ಕುಟಕಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್.ನಂದೀಶ್ ರೆಡ್ಡಿ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಚಾಮರಾಜನಗರ ಜಿಲ್ಲಾಧ್ಯಕ್ಷ ನಿರಂಜನ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.