ADVERTISEMENT

BJP ರಾಜ್ಯಾ‌ಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತವಲ್ಲ: ಶಾಸಕ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 16:01 IST
Last Updated 5 ಡಿಸೆಂಬರ್ 2024, 16:01 IST
<div class="paragraphs"><p>ರಮೇಶ ಜಾರಕಿಹೊಳಿ</p></div>

ರಮೇಶ ಜಾರಕಿಹೊಳಿ

   

ಬೆಳಗಾವಿ: ‘ಹುಡುಗಾಟದ ಬುದ್ಧಿಯುಳ್ಳ ಮತ್ತು ಚಿಕ್ಕ ವಯಸ್ಸಿನವರಾದ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ. ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೋರಾಟದ ಮೂಲಕ ಬಿ.ಎಸ್‌.ಯಡಿಯೂರಪ್ಪ ರಾಜಕೀಯದಲ್ಲಿ ದೊಡ್ಡ ಸ್ಥಾನಕ್ಕೇರಿದ್ದಾರೆ. ಆದರೆ, ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ವಿಜಯೇಂದ್ರ ಅಧ್ಯಕ್ಷರಾಗಿದ್ದಾರೆ. ಅವರಿಂದ ಯಡಿಯೂರಪ್ಪ ಅವರ ಹೋರಾಟ ಮತ್ತು ತ್ಯಾಗವೂ ಮಂಕಾಗುತ್ತದೆ’ ಎಂದರು.

ADVERTISEMENT

‘ವಕ್ಫ್‌ನಿಂದ ಆಸ್ತಿ ಕಬಳಿಕೆ ಕುರಿತಾಗಿ ನಾವು ಕೈಗೊಂಡ ಹೋರಾಟದ ಬಗ್ಗೆ ಕೇಂದ್ರ ಜಂಟಿ ಸದನ ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸಿದ್ದೇವೆ. ನಮ್ಮ ಹೋರಾಟಕ್ಕೆ ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.

‘ಸಂಸದ ಗೋವಿಂದ ಕಾರಜೋಳ ಮೂಲಕ ನಾವು ಈಗಾಗಲೇ ವರದಿ ಸಲ್ಲಿಸಿದ್ದೇವೆ’ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ರಮೇಶ, ‘ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ಹುಬ್ಬಳ್ಳಿ, ವಿಜಯಪುರ ಹಾಗೂ ಬೆಳಗಾವಿಗೆ ಭೇಟಿ ನೀಡಿ ಸಭೆ ನಡೆಸಿದರು. ಉಪವಾಸ ಕೈಬಿಟ್ಟು, ಪ್ರವಾಸ ಮಾಡಿ. ನೊಂದ ಜನರನ್ನು ಭೇಟಿಯಾಗಿ ವರದಿ ಸಿದ್ದಪಡಿಸಿ ಎಂದರು. ಅದಕ್ಕೆ ಜಿಲ್ಲಾ ಪ್ರವಾಸ ಕೈಗೊಂಡೆವು. ಪ್ರವಾಸಕ್ಕೂ ಮುನ್ನ ವಿಜಯೇಂದ್ರ ಹೇಗೆ ವರದಿ ಕೊಡುತ್ತಾರೆ. ಇದರಿಂದಲೇ ಅವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ತಿಳಿಯುತ್ತದೆ’ ಎಂದರು.

‘ವಿಜಯೇಂದ್ರ ಹತಾಶೆ ಭಾವನೆಯಿಂದ ರಾಜ್ಯ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ, ವಿಜಯಪುರ ಜಿಲ್ಲೆಯಲ್ಲಿ ವಕ್ಫ್‌ ವಿರುದ್ಧ ಹೋರಾಡುತ್ತೇವೆ. ನಾನೇ ಅಲ್ಲಿಗೆ ಹೋಗಿ ಬಂದ ನಂತರ, ಹೋರಾಟದ ದಿನಾಂಕ ನಿಗದಿಪಡಿಸುತ್ತೇವೆ’ ಎಂದು ಹೇಳಿದರು.

‘ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ವಕ್ಪ್ ವಿರುದ್ಧದ ಹೋರಾಟ ಮುಂದಿನ ಎರಡು ಜಿಲ್ಲೆಗೆ ಕೊನೆಗೊಳ್ಳಲಿದೆ. ಅವರು ಹೋದಲ್ಲೆಲ್ಲ ಜನರು ಪ್ರಶ್ನಿಸುತ್ತಿದ್ದಾರೆ. ನಾವು ಹೋರಾಟ ಮಾಡಿದ ಕಡೆಯಲ್ಲೇ ಮತ್ತೆ ಏಕೆ ಹೋಗುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.