
ವಿಮಾನ ನಿಲ್ದಾಣಕ್ಕಾಗಿ ಸಚಿವರ ‘ಜಗಳ’: ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ತಿಪ್ಪಣ್ಣಪ್ಪ ಕಮಕನೂರ ಅವರ ಪ್ರಶ್ನೆಗೆ ಸಚಿವ ಎಂ.ಬಿ.ಪಾಟೀಲ ಅವರು ಉತ್ತರಿಸುವಾಗ ಸಚಿವರಾದ ಶಿವಾನಂದ ಪಾಟೀಲ, ಈಶ್ವರ ಬಿ.ಖಂಡ್ರೆ ಅವರು ವಾಗ್ವಾದ ನಡೆಸಿದರು.
ಪ್ರಜಾವಾಣಿ ಚಿತ್ರ:ರಂಜು ಪಿ
ಜೆಡಿಎಸ್‌ನ ಟಿ.ಎ.ಶರವಣ ಅವರು ಪೌರಾಡಳಿತ ಇಲಾಖೆಯ ಅಡಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳ ಬಗ್ಗೆ ಪೌರಾಡಳಿತ ಸಚಿವ ರಹೀಂ ಖಾನ್ ಅವರಲ್ಲಿ ಪ್ರಶ್ನೆ ಕೇಳಿದ್ದರು. ಸಚಿವರು ಉತ್ತರಿಸುವಾಗ, ‘ಉತ್ತರ ಕೊಟ್ಟಿದ್ದಾರೆ’ ಎಂದರು. ಮಧ್ಯ ಪ್ರವೇಶಿಸಿದ ಶರವಣ, ‘ಸಚಿವರೇ, ಉತ್ತರ ಕೊಟ್ಟಿದ್ದಾರೆ ಎನ್ನಬಾರದು. ಉತ್ತರ ಕೊಟ್ಟಿದ್ದೇನೆ ಎನ್ನಬೇಕು’ ಎಂದು ಸರಿಪಡಿಸಿದರು. ರಹೀಂ ಖಾನ್ ಅವರು, ‘ಉತ್ತರ ಕೊಟ್ಟಿದ್ದೇನೆ’ ಎಂದು ಸರಿಪಡಿಸಿಕೊಂಡರು. ಶರವಣ ಅವರು, ‘ಅವರು ಮೊದಲು ಹೇಳಿದ್ದೇ ಸರಿಯಾಗಿತ್ತು. ಅಧಿಕಾರಿಗಳು ಉತ್ತರ ಕೊಟ್ಟಿದ್ದಾರೆ ಎಂದು ಸರಿಯಾಗಿ ಹೇಳಿದ್ದರು. ಇವರು ಸತ್ಯ ಹೇಳುವ ಸಚಿವರು’ ಎಂದರು.
––––––––
ವಿಮಾನ ನಿಲ್ದಾಣಕ್ಕಾಗಿ ‘ಜಗಳ’
ರಾಜ್ಯ ಸರ್ಕಾರದ ಸಚಿವರು ನಡೆಸಿದ ‘ಜಗಳ’ಕ್ಕೆ ವಿಧಾನ ಪರಿಷತ್ತು ಸಾಕ್ಷಿಯಾಯಿತು.
ಕಾಂಗ್ರೆಸ್‌ನ ತಿಪ್ಪಣ್ಣಪ್ಪ ಕಮಕನೂರ ಅವರು ಕಲಬುರ್ಗಿ ವಿಮಾನ ನಿಲ್ದಾಣದಿಂದ ವಿಮಾನಗಳ ಕಾರ್ಯಾಚರಣೆಯನ್ನು ರದ್ದುಪಡಿಸಲಾಗುತ್ತಿದೆ. ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರನ್ನು ಕೋರಿದರು.
ಸಚಿವ ಎಂ.ಬಿ.ಪಾಟೀಲ, ‘ಕೇಂದ್ರ ಸರ್ಕಾರ ಉಡಾನ್ ಯೋಜನೆ ಅಡಿ ನೀಡಲಾಗುತ್ತಿದ್ದ ನೆರವು ಸ್ಥಗಿತವಾಗಿದೆ. ಈ ಕಾರಣದಿಂದ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿವೆ. ಕೇಂದ್ರ ಸರ್ಕಾರವು ಉಡಾನ್ ಯೋಜನೆಯನ್ನು ಇನ್ನೂ 7-10 ವರ್ಷ ವಿಸ್ತರಿಸಬೇಕು’ ಎಂದರು.
ತಿಪ್ಪಣ್ಣಪ್ಪ, ‘ನಮಗೆ ವಿಮಾನ ನಿಲ್ದಾಣ ಬೇಕೇಬೇಕು’ ಎಂದು ಪಟ್ಟುಹಿಡಿದರು. ಆಗ ಮಧ್ಯಪ್ರವೇಶಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ‘ಬೀದರ್‌ಗೆ ಹೇಗೆ ವಿಮಾನ ನಿಲ್ದಾಣ ಕೊಟ್ಟಿರಿ’ ಎಂದು ಎಂ.ಬಿ.ಪಾಟೀಲರತ್ತ ಪ್ರಶ್ನೆ ಎಸೆದರು.
ಆ ಪ್ರಶ್ನೆಗೆ ಕೆರಳಿದ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ‘ಬೀದರ್‌ನಲ್ಲಿ 60 ವರ್ಷಗಳಿಂದ ವಾಯುನೆಲೆ ಇದೆ. ಅಲ್ಲಿ ₹20ಕೋಟಿ– ₹30 ಕೋಟಿ ವೆಚ್ಚ ಮಾಡಿ, ಟರ್ಮಿನಲ್ ನಿರ್ಮಿಸಿ ವಿಮಾನಯಾನ ಆರಂಭಿಸಲಾಗಿದೆ. ಬೇರೆಡೆ ₹200ಕೋಟಿ-₹300 ಕೋಟಿ ಬೇಕು’ ಎಂದು ಪಟ್ಟು ಹಾಕಿದರು.
ಸಚಿವರ ವಾದ-ಪ್ರತಿವಾದಗಳ ಮಧ್ಯೆ ಎದ್ದುನಿಂತ ಬಿಜೆಪಿಯ ಸಿ.ಟಿ.ರವಿ, ‘ಸಚಿವರೇ ಜಗಳ ಆಡುತ್ತಿದ್ದಾರೆ. ಇದು ಕ್ಯಾಬಿನೆಟ್ ಜಗಳ’ ಎಂದು ಕಾಲೆಳೆದರು. ಎಂ.ಬಿ.ಪಾಟೀಲ ಅವರು, ಶಿವಾನಂದ ಪಾಟೀಲ ಮತ್ತು ಈಶ್ವರ ಖಂಡ್ರೆ ಅವರನ್ನು ಸಮಾಧಾನಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.