ADVERTISEMENT

ಸಂಪುಟ ಪುನರ್‌ರಚನೆ: ಕಾಂಗ್ರೆಸ್ ಪಾಳಯದಲ್ಲಿ ಸಂಚಲನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 0:50 IST
Last Updated 10 ಅಕ್ಟೋಬರ್ 2025, 0:50 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ&nbsp;</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ 

   

ಬೆಂಗಳೂರು:  ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ ಪಾಳಯದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಸದ್ದು ಜೋರಾಗಲಾರಂಭಿಸಿದೆ.

ಹೈಕಮಾಂಡ್‌ ಎಚ್ಚರಿಕೆಗೂ ಕಿವಿಗೊಡದೆ ಸಚಿವರು, ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರ ಬಹಿರಂಗ ಹೇಳಿಕೆ ನೀಡಲು ಮತ್ತೆ ಶುರು ಮಾಡಿದ್ದಾರೆ.

ADVERTISEMENT

ಈ ಬೆಳವಣಿಗೆಗಳ ನಡುವೆ, ಮುಖ್ಯಮಂತ್ರಿಯ ಆಪ್ತ ವಲಯ ದಲ್ಲಿರುವ ಸಚಿವರಾದ ಸತೀಶ ಜಾರಕಿಹೊಳಿ, ಎಚ್‌.ಸಿ. ಮಹದೇವಪ್ಪ ಮತ್ತು ಜಿ. ಪರಮೇಶ್ವರ ಅವರು ಕುಮಾರಕೃಪ ಅತಿಥಿಗೃಹದ ಸಮೀಪವಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಗುರುವಾರ ಬೆಳಿಗ್ಗೆ ರಹಸ್ಯ ಸಭೆ ನಡೆಸಿದ್ದಾರೆ. ಸಚಿವರ ಈ ನಡೆ ನಾನಾ ರಾಜಕೀಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆಯ ಮಾತುಗಳು ಮುನ್ನೆಲೆಗೆ ಬಂದಿರುವ ಹೊತ್ತಿನಲ್ಲಿ ಈ ಮೂವರು ಸಭೆ ನಡೆಸಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ನಾಯಕತ್ವ ಬದಲಾವಣೆಯ ವಿಚಾರದಲ್ಲಿನ ಗೊಂದಲವನ್ನು ಹೈಕಮಾಂಡ್‌ ಬಗೆಹರಿಸಬೇಕು. ಪಕ್ಷದಲ್ಲಿರುವ ‘ಒಬ್ಬರಿಗೆ ಒಂದೇ ಹುದ್ದೆ’ ನಿಯಮ ಪಾಲನೆ ಮಾಡಬೇಕು. ಸಂಪುಟ ಪುನರ್‌ರಚನೆಯಾದರೆ ಕೆ.ಎನ್‌. ರಾಜಣ್ಣ ಅವರಿಗೆ ಮತ್ತೆ ಅವಕಾಶ ನೀಡಬೇಕು ಮತ್ತಿತರ ವಿಷಯಗಳ ಬಗ್ಗೆ ಈ ಮೂವರೂ ವಿಚಾರ ವಿನಿಮಯ ನಡೆಸಿದರು ಎಂದು ಗೊತ್ತಾಗಿದೆ.

ನಾಯಕತ್ವ ಗೊಂದಲ‌ವನ್ನು ಹೈಕಮಾಂಡ್‌ ಬಗೆಹರಿಸಬೇಕೆಂದು ಬಹಿರಂಗವಾಗಿಯೇ ಸತೀಶ ಜಾರಕಿಹೊಳಿ ಮತ್ತು ಜಿ. ಪರಮೇಶ್ವರ ಇತ್ತೀಚೆಗಷ್ಟೆ ಒತ್ತಾಯಿಸಿದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನವೆಂಬರ್‌ಗೆ ಎರಡೂವರೆ ವರ್ಷ ಪೂರ್ಣಗೊಳಿಸಲಿದ್ದಾರೆ. ‘ಸರ್ಕಾರ ರಚನೆಯ ಸಂದರ್ಭದಲ್ಲಿ ‘ಅಧಿಕಾರ ಹಂಚಿಕೆ’ ಸೂತ್ರ ನಡೆದಿದೆ ಅದು ಅನು ಷ್ಠಾನಗೊಂಡರೆ, ಸಿದ್ದರಾಮಯ್ಯ ಬಿಟ್ಟು ಕೊಡಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಒಂದು ಬಣ ಪದೇ ಪದೇ ಪ್ರತಿಪಾದಿಸುತ್ತಾ ಬಂದಿದೆ.

ಸದ್ದಿನ ಹಿಂದಿನ ಲೆಕ್ಕಾಚಾರ

ಕೆಲವು ತಿಂಗಳಿಗಳಿಂದ ತಣ್ಣಗಾಗಿದ್ದ ಸಂಪುಟ ಪುನರ್‌ ರಚನೆ ವಿಷಯ ಮತ್ತೆ ಮುನ್ನೆಲೆಗೆ ಬಂದಿರುವ ಹಿಂದೆ ಹಲವು ಲೆಕ್ಕಾಚಾರಗಳಿವೆ ಎಂಬ ಚರ್ಚೆ ಕಾಂಗ್ರೆಸ್ ಪಡಸಾಲೆಯಲ್ಲಿ ಶುರುವಾಗಿದೆ. 

ವಾಲ್ಮೀಕಿ ಜಯಂತಿಯ ದಿನ ಮಾತನಾಡಿದ್ದ ಸಿದ್ದರಾಮಯ್ಯ, ‘ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ಸ್ಥಾನ ನೀಡುವ ಬಗ್ಗೆ ಸಂಪುಟ ವಿಸ್ತರಣೆ ವೇಳೆ ನೋಡೋಣ’ ಎಂದಿದ್ದರು. ‘ನವೆಂಬರ್ ಕ್ರಾಂತಿಯೂ ಇಲ್ಲ ಏನೂ ಇಲ್ಲ’ ಎಂದೂ ಅದೇ ಆಸುಪಾಸು ಹೇಳಿಕೆ ನೀಡಿದ್ದರು. 

ಹಾಗಿದ್ದರೂ ದಿಢೀರನೇ ಸಂಪುಟ ಪುನರ್ ರಚನೆಯ ಸಂಗತಿ ಚರ್ಚೆಯ ಕೇಂದ್ರಕ್ಕೆ ಬಂದಿದ್ದು ಏಕೆ ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ಆರಂಭವಾಗಿವೆ. ತಮ್ಮ ಬೆನ್ನಿಗೆ ನಿಂತಿರುವ ಸಚಿವರು ಹಾಗೂ ಶಾಸಕರು ದೂರ ಸರಿಯದಂತೆ, ಅವರನ್ನು ಹಿಡಿದಿಟ್ಟುಕೊಳ್ಳುವ ಜಾಣ ನಡೆಯನ್ನು ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ ಎಂಬ ವಿಶ್ಲೇಷಣೆ ಕಾಂಗ್ರೆಸ್ ಪಡಸಾಲೆಯಲ್ಲಿ ನಡೆಯುತ್ತಿದೆ.

ಬಿಹಾರ ಚುನಾವಣೆ ಬಳಿಕ ಏನೋ ಆಗಲಿದೆ ಎಂಬ ವದಂತಿಗಳಿಗೆ ತೆರೆ ಎಳೆದು, ತಮ್ಮ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಯತ್ನವೂ ಇದರ ಹಿಂದೆ ಇದೆ ಎಂಬ ಅಭಿಪ್ರಾಯವೂ ಕಾಂಗ್ರೆಸ್‌ನಲ್ಲಿದೆ.

ಸಂಪುಟ ಪುನರ್‌ ರಚನೆಗೂ ಸಚಿವರಿಗೆ ಔತಣ ಕೂಟ ಆಯೋಜಿಸಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಊಟ ಕೊಟ್ಟು ಬಹಳ ದಿನ ಆಗಿದೆ. ಹೀಗಾಗಿ ಆಹ್ವಾನಿಸಿದ್ದೇನೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಔತಣಕೂಟಕ್ಕೆ ಸಿ.ಎಂ ಆಹ್ವಾನ

‘ಇದೇ 13ರಂದು ಔತಣಕೂಟ ಆಯೋಜಿಸಿದ್ದು, ಅದಕ್ಕೆ ಎಲ್ಲರೂ ಬರಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಸಹೋದ್ಯೋಗಿಗಳಿಗೆ ಆಹ್ವಾನ ನೀಡಿದರು.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ‘ಯಾವ ಕಾರಣಕ್ಕೆ ಔತಣ ಕೂಟ’ ಎಂದು ಕೆಲವು ಸಚಿವರು ಪ್ರಶ್ನಿಸಿದರು. ‘ಇತ್ತೀಚೆಗೆ ಗುತ್ತಿಗೆದಾರರ ಸಂಘದವರು ಕಮಿಷನ್‌ ವಿಚಾರವಾಗಿ ಕೆಲವು ಇಲಾಖೆಗಳ ಬಗ್ಗೆ ಆರೋಪ ಮಾಡಿದ್ದಾರೆ. ಅದರ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂಬ ಕಾರಣಕ್ಕೆ ಔತಣ ಕೂಟ ಏರ್ಪಡಿಸಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ, ‘ನನ್ನ ಇಲಾಖೆಯಲ್ಲಿ ಯಾವುದೇ ಗುತ್ತಿಗೆದಾರರಿಗೆ ಬಿಲ್‌ ಬಾಕಿ ಉಳಿಸಿಕೊಂಡಿಲ್ಲ. ಕಮಿಷನ್ ಆರೋಪವೂ ಇಲ್ಲ’ ಎಂದರು. ಆಗ ಕೆಲವು ಸಚಿವರು, ‘ಹಾಗಿದ್ದರೆ ನಮ್ಮ ಇಲಾಖೆಗಳಲ್ಲಿ ಆಗಿದೆ ಎಂಬುದು ನಿಮ್ಮ ಮಾತಿನ ಅರ್ಥವೇ’ ಎಂದು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ‘ಎಲ್ಲ ವಿಚಾರಗಳನ್ನು ಆವತ್ತೇ ಮಾತನಾಡೋಣ’ ಎಂದು ಚರ್ಚೆಗೆ ತೆರೆ ಎಳೆದರು ಎಂದು ಗೊತ್ತಾಗಿದೆ.

‘ಮಾಹಿತಿ ಇಲ್ಲ’

‘ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಮತ್ತು ಮುಖ್ಯಮಂತ್ರಿ ಯವರಿಗೆ ಬಿಟ್ಟ ವಿಚಾರ. ಅವರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.