ADVERTISEMENT

ಗುಜರಾತಿನಂತೆ ರಾಜ್ಯದಲ್ಲೂ ಸಚಿವ ಸಂಪುಟ ಪುನರ್‌ ರಚನೆಯಾಗಲಿ: ಶಾಸಕ ನಂಜೇಗೌಡ ಆಗ್ರಹ

ಹಳಬರನ್ನು ತೆಗೆದು ಹೊಸಬರಿಗೆ ಸಚಿವ ಸ್ಥಾನ ಕೊಡಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 17:37 IST
Last Updated 18 ಅಕ್ಟೋಬರ್ 2025, 17:37 IST
<div class="paragraphs"><p>ಶಾಸಕ ನಂಜೇಗೌಡ</p></div>

ಶಾಸಕ ನಂಜೇಗೌಡ

   

ಕೋಲಾರ: ಗುಜರಾತಿನಂತೆ ಕರ್ನಾಟಕದಲ್ಲೂ ಸಚಿವ ಸಂಪುಟ ಪುನರ್‌ ರಚನೆಯಾಗಬೇಕು. ಹಳಬರನ್ನು ತೆಗೆದು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಒತ್ತಾಯಿಸಿದರು.

ಜಿಲ್ಲಾ ಹಾಲು ಒಕ್ಕೂಟದ (ಕೋಮುಲ್‌) ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲಾ ಮಂತ್ರಿಗಳನ್ನು ಬದಲಾಯಿಸಬೇಕು. ಕೋಲಾರ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್‌ ಶಾಸಕರಿದ್ದು, ಮಂತ್ರಿ ಸ್ಥಾನ ಕೊಟ್ಟಿಲ್ಲ. ಈ ಬಗ್ಗೆ ನಮಗೆ ನೋವಿದೆ. ನಮಗೂ ಅವಕಾಶ ಮಾಡಿಕೊಡಬೇಕು. ನಾವೆಲ್ಲಾ ಕಷ್ಟಪಟ್ಟು ಶಾಸಕರಾಗಿದ್ದೇವೆ. ಯಾವಾಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆಯೋ ಗೊತ್ತಿಲ್ಲ. ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಒಗ್ಗಟ್ಟಾಗಿದ್ದರೆ ಅವಕಾಶ ಖಂಡಿತ ಸಿಗಲಿದೆ’ ಎಂದರು.

ADVERTISEMENT

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಸಂಬಂಧ ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಂಬಂಧ ಚೆನ್ನಾಗಿದೆ. ಎಲ್ಲಾ ಶಾಸಕರಿಗೂ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಗುಜರಾತಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಹೊರತುಪಡಿಸಿ ಎಲ್ಲರೂ ರಾಜೀನಾಮೆ ಕೊಟ್ಟಿದ್ದರು. ನಂತರ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮಲ್ಲೂ ಹೊಸಬರಿಗೆ ದಾರಿ ಮಾಡಿಕೊಡಬೇಕು ಎಂದು ತಿಳಿಸಿದರು.

‘ಪ್ರಿಯಾಂಕ್‌ರನ್ನು ಸಿಎಂ ಮಾಡಲು ಹೈಕಮಾಂಡ್ ಚಿಂತನೆ’

ಗುರುಮಠಕಲ್‌ (ಯಾದಗಿರಿ ಜಿಲ್ಲೆ): ‘ಸಚಿವ ಪ್ರಿಯಾಂಕ್‌ ಖರ್ಗೆ ಅವರು ರಾಜ್ಯದ ಕ್ರಿಯಾಶೀಲ ನಾಯಕರಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಮುಖ್ಯಮಂತ್ರಿಯಾಗಿಸಲು ಹೈಕಮಾಂಡ್‌ ಚಿಂತಿಸುತ್ತಿದೆ’ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಹೇಳಿದರು. 

ಪಟ್ಟಣದಲ್ಲಿ ಶನಿವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಿಯಾಂಕ್ ಅವರು ಮುಖ್ಯಮಂತ್ರಿ ಆಗುವುದನ್ನು ನೋಡಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕಾತುರರಾಗಿದ್ದಾರೆ. ಪ್ರಿಯಾಂಕ್‌ ಅವರ ಅಭಿವೃದ್ಧಿ ಕೆಲಸ, ಜನಪ್ರಿಯತೆ ಕಂಡರೆ ಬಿಜೆಪಿಗರಿಗೆ ಹೊಟ್ಟೆಕಿಚ್ಚು. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿ, ಬೆದರಿಕೆ ಹಾಕುತ್ತಿದ್ದಾರೆ’ ಎಂದರು.

ಪರಮೇಶ್ವರ ಕ್ಷೇತ್ರ ಬಿಟ್ಟು ಕೊಡಲಿ: ರಾಜಣ್ಣ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಾಮಾನ್ಯ ಕ್ಷೇತ್ರದಲ್ಲಿ ಯಾಕೆ ನಿಲ್ಲಬಾರದು. ಅವರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಮೀಸಲು ಕ್ಷೇತ್ರದಿಂದ ಮತ್ತೊಬ್ಬರಿಗೆ ಸಹಾಯ ಆಗುವುದಿಲ್ಲವೇ ಎಂದು ಶಾಸಕ ಕೆ.ಎನ್‌.ರಾಜಣ್ಣ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಜಾಗೃತ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ‘ಸಾಮಾಜಿಕ, ಶೈಕ್ಷಣಿಕ  ಸಮೀಕ್ಷೆ– ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಮೀಸಲು ಕ್ಷೇತ್ರ ಬಿಟ್ಟುಕೊಡುವ ಮನಃಸ್ಥಿತಿ ನಮ್ಮಲ್ಲಿ ಬರಬೇಕು. ಎಲ್ಲವನ್ನು ನಾವೇ ಬಳಸಿಕೊಂಡು ಕೂತರೆ ಬೇರೆಯವರು ಎಲ್ಲಿಗೆ ಹೋಗುತ್ತಾರೆ. ನಮ್ಮಲ್ಲಿ ಧೈರ್ಯದ ಕೊರತೆ ಇದ್ದು, ಅದು ಹೋಗಬೇಕು ಎಂದು ಪರಮೇಶ್ವರ ಅವರಿಗೆ ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌.ಕಾಂತರಾಜು, ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ವರದಿ ಜಾರಿ ಮಾಡುವ ಮನಸ್ಥಿತಿ ಹೊಂದಿದ್ದರು. ಆದರೆ, ವರದಿ ಜಾರಿಗೊಳಿಸದಂತೆ ಕಾಂಗ್ರೆಸ್‌ ನಾಯಕರೇ ಅವರ ಮೇಲೆ ಒತ್ತಡ ತಂದರು. ಹೀಗಾಗಿ ಮತ್ತೊಂದು ಸರ್ವೆ ನಡೆಸುವ ನಿರ್ಣಯ ಕೈಗೊಳ್ಳಬೇಕಾಯಿತು. ಈ ವಿಚಾರದಲ್ಲಿ ಅವರು ನಿಸ್ಸಹಾಯಕರಾದರು ಎಂದು ಹೇಳಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿ, ‘ಯತೀಂದ್ರ ಸಿದ್ದರಾಮಯ್ಯ ಮುಂದೊಂದು ದಿನ ಮುಖ್ಯಮಂತ್ರಿ ಯಾಕಾಗಬಾರದು? ದೇವೇಗೌಡರಿಗೆ ಕುಮಾರಸ್ವಾಮಿ ಉತ್ತರಾಧಿಕಾರಿ ಆಗಬಹುದು. ಸಿದ್ದರಾಮಯ್ಯಗೆ ಯತೀಂದ್ರ ಉತ್ತರಾಧಿಕಾರಿ ಆದರೆ ತೊಂದರೆ ಏನು? ದೇವೇಗೌಡರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಆಗುವುದಕ್ಕೆ ಅವರ ಹೋರಾಟ ಇದೆ. ಕುಮಾರಸ್ವಾಮಿ ಅವರಿಗೆ ಏನಿದೆ? ಅವರಪ್ಪನ ಹೆಸರಷ್ಟೇ ಬಂಡವಾಳ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.