ADVERTISEMENT

‘ಡಿಸಿಎಂ’ ಹುದ್ದೆ ರದ್ದು?

ಹೆಚ್ಚುತ್ತಿರುವ ಸಚಿವ ಸ್ಥಾನ ಆಕಾಂಕ್ಷಿಗಳ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:15 IST
Last Updated 16 ಡಿಸೆಂಬರ್ 2019, 20:15 IST
ಶ್ರೀರಾಮುಲು
ಶ್ರೀರಾಮುಲು   

ಬೆಂಗಳೂರು: ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಮಂಡಿಸುತ್ತಿರುವ ಬೆನ್ನಲ್ಲೇ, ಸಂಪುಟ ವಿಸ್ತರಣೆ ವೇಳೆ ಈ ಹುದ್ದೆಗಳನ್ನೇ ರದ್ದುಪಡಿಸುವ ಕುರಿತು ಬಿಜೆಪಿ ವಲಯದಲ್ಲಿ ಚರ್ಚೆ ಶುರುವಾಗಿದೆ.

ಬೆಂಗಳೂರಿಗೆ ಸೋಮವಾರ ಭೇಟಿ ನೀಡಿದ್ದ‍ಪಕ್ಷದ ರಾಷ್ಟ್ರೀಯ (ಸಂಘಟನೆ) ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದ ಶ್ರೀರಾಮುಲು, ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹಿಂದೆ ನೀಡಿದ್ದ ಭರವಸೆ ಈಡೇರಿಸಬೇಕು ಎಂದು ಮನವಿ ಮಾಡಿದರು ಎನ್ನಲಾಗಿದೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶ್ರೀರಾಮುಲು, ‘ಪಕ್ಷ ವಹಿಸಿಕೊಟ್ಟ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ನನ್ನನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬುದು ಜನರ ಬೇಡಿಕೆ. ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದಾಗಿದೆ’ ಎಂದರು.

ADVERTISEMENT

ಬಿಎಸ್‌ವೈ–ಸಂತೋಷ್ ಚರ್ಚೆ: ಯಡಿಯೂರಪ್ಪ ಹಾಗೂ ಸಂತೋಷ್ ಭೇಟಿ ವೇಳೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಹೆಚ್ಚುತ್ತಿರುವ ಬಗ್ಗೆಯೂ ಸಮಾಲೋಚನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಮೈತ್ರಿ ಸರ್ಕಾರ ಪತನಕ್ಕೆ ಮುನ್ನ ರಮೇಶ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಅದೇ ಸಮುದಾಯದ ಶ್ರೀರಾಮುಲು ಅವರು ಈಗ ಉಪಮುಖ್ಯಮಂತ್ರಿ ಹುದ್ದೆ ಬೇಕು ಎಂದು ಒತ್ತಡ ಹಾಕಲು ಶುರು ಮಾಡಿದ್ದಾರೆ. ಉ‍ಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಹೆಚ್ಚಾದರೆ ಈಗಿರುವ ಮೂವರು ಉಪಮುಖ್ಯಮಂತ್ರಿಗಳ ಹುದ್ದೆಗಳನ್ನು ಸಚಿವ ಸ್ಥಾನಕ್ಕೆ ಸೀಮಿತಗೊಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಪಕ್ಷದ ಅಧ್ಯಕ್ಷರಾದ ಅಮಿತ್ ಶಾ ಮುಂದೆ ರಾಜ್ಯದ ಪರಿಸ್ಥಿತಿ ವಿವರಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಉಭಯ ನಾಯಕರು ನಿರ್ಧರಿಸಿದರು ಎಂದು ಮೂಲಗಳು ಹೇಳಿವೆ.

ಚುನಾವಣೆಯಲ್ಲಿ ಸೋತ ಹೊಸಕೋಟೆಯ ಎಂ.ಟಿ.ಬಿ. ನಾಗರಾಜ್ ಅವರು ಸಚಿವ ಸ್ಥಾನ ಬೇಡಿಕೆ ಮಂಡಿಸಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದು ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.