ADVERTISEMENT

ಜಾತಿ ಆಧಾರದಲ್ಲಿ ಸಿಎಂ ಆಗಬಯಸುವವರು ಜಾತಿ ಸಂಘಟನೆ ಕಟ್ಟಲಿ: ಬಿ.ಕೆ.ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 13:33 IST
Last Updated 20 ಜುಲೈ 2022, 13:33 IST
ಸುದ್ದಿಗೋಷ್ಠಿಯಲ್ಲಿ ಬಿ.ಕೆ.ಹರಿಪ್ರಸಾದ್‌ ಮಾತನಾಡಿದರು. ಜೆ.ಆರ್‌.ಲೋಬೊ, ಐವನ್‌ ಡಿಸೋಜ ಇದ್ದಾರೆ– ಪ್ರಜಾವಾಣಿ ಚಿತ್ರ
ಸುದ್ದಿಗೋಷ್ಠಿಯಲ್ಲಿ ಬಿ.ಕೆ.ಹರಿಪ್ರಸಾದ್‌ ಮಾತನಾಡಿದರು. ಜೆ.ಆರ್‌.ಲೋಬೊ, ಐವನ್‌ ಡಿಸೋಜ ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ‘ಕಾಂಗ್ರೆಸ್‌ ಪಕ್ಷವು ಯಾವುದೇ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಿಲ್ಲ. ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಆಗಬಯಸುವವರು ತಮ್ಮ ಜಾತಿ ಸಂಘಟನೆ ಕಟ್ಟಿ, ಅದರ ಮೂಲಕವೇ ಆಸೆ ತೀರಿಸಿಕೊಳ್ಳಲಿ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಜಾತಿ ಧರ್ಮಗಳ ನಾಯಕರಿಗೂ ಅಧಿಕಾರದ ಕನಸು ಇದ್ದೇ ಇರುತ್ತದೆ. ಜಾತಿ ಧರ್ಮದ ಹೆಸರಿನಲ್ಲಿ ಕಾಂಗ್ರೆಸ್‌ ಯಾವತ್ತೂ ರಾಜಕಾರಣ ಮಾಡಿಲ್ಲ.ಕಾಂಗ್ರೆಸ್‌ಗೆ ಬಹುಮತ ಬಂದರೆ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಪಕ್ಷದ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ’ ಎಂದರು.

‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಸಲುವಾಗಿ ಕೈಗೊಳ್ಳುವ ‘ಸಿದ್ದರಾಮೋತ್ಸವ’ ಪಕ್ಷದ ಕಾರ್ಯಕ್ರಮವಲ್ಲ. ಅವರ ಅಭಿಮಾನಿಗಳು ಸೇರಿ ನಡೆಸುವ ಕಾರ್ಯಕ್ರಮ. ಅದರ ವೆಚ್ಚವನ್ನೂ ಅಭಿಮಾನಿಗಳೇ ಭರಿಸುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತರಗತಿಗಳು ಆರಂಭವಾದ ಬಳಿಕವೂ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ತಲುಪಿಲ್ಲ. ರಷ್ಯಾ–ಉಕ್ರೇನ್‌ ಯುದ್ಧದಿಂದಾಗಿ ಕಾಗದ ಪೂರೈಕೆ ವ್ಯತ್ಯಯವಾಗಿದ್ದರಿಂದ ಪಠ್ಯ ಪುಸ್ತಕ ಮುದ್ರಣ ವಿಳಂಬವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನಮ್ಮಲ್ಲಿಗೆ ಕಾಗದ ಪೂರೈಕೆ ಆಗುವುದು ಕೆನಡಾದಿಂದ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಹೇಳಿಕೆ ಕೊಡುವ ಬದಲು ಸರ್ಕಾರ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಪಠ್ಯ ಪುಸ್ತಕ ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕಡಲ್ಕೊರೆತ: ಮುನ್ನೆಚ್ಚರಿಕೆ ವಹಿಸದ ಸರ್ಕಾರ:

‘ಕಡಲ್ಕೊರೆತ ತಡೆಯಲು ಮುನ್ನೆಚ್ಚರಿಕೆ ವಹಿಸದ ಕಾರಣ ಉಳ್ಳಾಲ ಹಾಗೂ ಸುರತ್ಕಲ್‌ ಪ್ರದೇಶದಲ್ಲಿ ಈ ಬಾರಿ ಕಡಲ್ಕೊರೆತದ ಹಾವಳಿ ಹೆಚ್ಚಾಗಿದೆ. ಈ ಸಲ ಮಾನವ ನಿರ್ಮಿತ ತಪ್ಪುಗಳಿಂದಾಗಿಯೇ ಸಮಸ್ಯೆ ಉಂಟಾಗಿದೆ’ ಎಂದು ಬಿ.ಕೆ.ಹರಿಪ್ರಸಾದ್‌ ಆರೋಪಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಹಾಗೂ ಕಡಲ್ಕೊರೆತ ಹಾವಳಿ ಕಾಣಿಸಿಕೊಂಡ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ್ದೇನೆ. ಕಡಲ್ಕೊರೆತ ತಡೆಯಲು ಏಷ್ಯಾ ಅಭಿವೃದ್ಧಿ ಬ್ಯಾಂಕಿನ ನೆರವಿನಿಂದ ಕೈಗೊಂಡ ಕಾಮಗಾರಿಗಳು ಕಳಪೆಯಾಗಿವೆ. ಕೆಲವೆಡೆ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ್ದಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೇವಲ ಹೇಳಿಕೆ ನೀಡಿ ಮರಳಿದ್ದಾರೆ. ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.

‘ಬಟ್ಟಪ್ಪಾಡಿ ಬಳಿ ಅರಬ್ಬೀ ಸಮುದ್ರದಲ್ಲಿ ಮುಳುಗಿರುವ ಹಡಗಿನಿಂದ ಇನ್ನೂ ತೈಲ ಹೊರತೆಗೆದಿಲ್ಲ. ಅದರಿಂದ ಏನಾದರೂ ಅನಾಹುತ ಉಂಟಾದರೆ, ಆಗುವ ದುಷ್ಪರಿಣಾಮಗಳನ್ನು ಊಹಿಸಲೂ ಸಾಧ್ಯವಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಗುರುಪುರ ಮಳಲಿಯಲ್ಲಿ ಮಳೆಯಿಂದ ಗುಡ್ಡ ಕುಸಿದು ಎರಡು ವರ್ಷಗಳ ಹಿಂದೆ ಮನೆ ಕಳೆದುಕೊಂಡ 20 ಕುಟುಂಬಗಳಿಗೆ ಇನ್ನೂ ಪುನರ್ವಸತಿ ಕಲ್ಪಿಸಿಲ್ಲ. ಈ ದುರ್ಘಟನೆಯಲ್ಲಿ ಒಬ್ಬರು ಜೀವ ಕಳೆದುಕೊಂಡಿದ್ದರು. ಸರ್ಕಾರ ಈಗಲೂ ನಿದ್ರಾವಸ್ಥೆಯಲ್ಲೇ ಇರುವುದನ್ನು ಇದು ತೋರಿಸುತ್ತದೆ’ ಎಂದು ಟೀಕಿಸಿದರು.

‘ಸ್ಮಾರ್ಟ್‌ ಸಿಟಿಯಾಗಿದ್ದ ಮಂಗಳೂರನ್ನು ದುರಂತಮಯ ನಗರವನ್ನಾಗಿ ಪರಿವರ್ತಿಸಿದ್ದಾರೆ. ಕಂಕನಾಡಿ– ಪಡೀಲ್‌ ಬಳಿ ಮಳೆನೀರು ರಸ್ತೆಯಲ್ಲೇ ನಿಲ್ಲುವ ಸಮಸ್ಯೆಯನ್ನೂ ಬಗೆಹರಿಸಿಲ್ಲ’ ಎಂದು ದೂರಿದರು.

ಪಕ್ಷದ ಮುಖಂಡರಾದ ಐವನ್‌ ಡಿಸೋಜ, ಜೆ.ಆರ್‌.ಲೋಬೋ, ಶಶಿಧರ್‌ ಹೆಗ್ಡೆ, ಶಾಹುಲ್‌ ಹಮೀದ್‌, ಟಿ.ಕೆ.ಸುಧೀರ್‌, ಅಬ್ದುಲ್‌ ರವೂಫ್‌, ಶಾಹುಲ್‌ ಹಮೀದ್‌, ನವೀನ್‌ ಡಿಸೋಜ, ನೀರಜ್‌ಪಾಲ್‌, ಶುಭೋದಯ ಆಳ್ವ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.