ADVERTISEMENT

ಜಾತಿ ನಿಂದನೆ ಪ್ರಕರಣ: ಪಿರಿಯಾಪಟ್ಟಣದಲ್ಲಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 19:30 IST
Last Updated 8 ನವೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಟ್ಟದಪುರ (ಮೈಸೂರು ಜಿಲ್ಲೆ): ಪಿರಿಯಾಪಟ್ಟಣ ತಾಲ್ಲೂಕಿನ ಬೆಕ್ಕರೆ ಗ್ರಾಮದಲ್ಲಿ ಬಾಲಚಂದ್ರ ಬಸವೇಶ್ವರ ದೇವಾಲಯಕ್ಕೆ ಪೂಜೆ ಮಾಡಲು ತೆರಳಿದ್ದ ಪರಿಶಿಷ್ಟ ಸಮುದಾಯದ ವ್ಯಕ್ತಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ, 8 ಮಂದಿ ವಿರುದ್ಧ ಪರಿಶಿಷ್ಟ ಜಾತಿ–ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಅ. 25ರಂದು ದೇವಸ್ಥಾನಕ್ಕೆ ತೆರಳಿದ್ದಾಗ ನಿವೃತ್ತ ಶಿಕ್ಷಕ ಬಸವೇಗೌಡ ಪ್ರವೇಶ ನಿರಾಕರಿಸಿದ್ದರು. ಅದನ್ನು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಮುರಳೀಧರ, ಪ್ರಸನ್ನ, ಬಿ.ಆರ್. ರವಿಕುಮಾರ್, ಚಂದ್ರಶೇಖರ್, ಬಸವರಾಜು, ಬಿ.ಎಸ್. ಮಹದೇವ್, ನವೀನ್ ಅವರು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಬಿ.ಎಸ್‌.ಮಹದೇವ ಅವರು ನ.4 ರಂದು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಆರೋಪಿ ಬಸವೇಗೌಡ ಅವರು ನಾಮಧಾರಿಗೌಡ ಸಂಘವನ್ನು ಸ್ಥಾಪಿಸಿ, ಬಸವೇಶ್ವರ ದೇವರ ಹಬ್ಬ, ಜಾತ್ರೆ, ಕಾರ್ತಿಕ ಪೂಜೆ ಸಮಯದಲ್ಲಿ ಪರಿಶಿಷ್ಟರಿಗೆ ಅವಕಾಶ ಕೊಡದೇ, ಅಡ್ಡಿಪಡಿಸುತ್ತಿದ್ದರು. ಒಂದು ವರ್ಷದಿಂದ ಸಣ್ಣಪುಟ್ಟ ಜಗಳ ನಡೆದು ಠಾಣೆಯಲ್ಲಿ ತೀರ್ಮಾನವಾಗಿತ್ತು. ಅ.25 ರಂದು ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

ಗ್ರಾಮದಲ್ಲಿ ಮುಂಜಾಗ್ರತ ಕ್ರಮವಾಗಿ ಸಶಸ್ತ್ರ ಪೊಲೀಸ್‌ ತುಕಡಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.