ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯ ‘ದತ್ತಾಂಶಗಳ ಅಧ್ಯಯನ’ ವರದಿಯು ಜಾತಿಯೊಂದರ ಎಲ್ಲ ಉಪ ಜಾತಿಗಳನ್ನು ಆಯಾ ಮುಖ್ಯ ಜಾತಿಯ ಅಡಿಯಲ್ಲಿ ಸೇರಿಸಿ ವರ್ಗೀಕರಣ ಮಾಡಿದೆ. ಹೀಗೆ ವರ್ಗೀಕರಿಸಿ ಜಾತಿಯ ಒಟ್ಟು ಜನಸಂಖ್ಯೆಯನ್ನು ಲೆಕ್ಕ ಹಾಕಿರುವುದರಿಂದಾಗಿ, ಒಕ್ಕಲಿಗ ಮತ್ತು ಲಿಂಗಾಯತರು ತಮ್ಮ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ ಎಂದು ದೂರಲು ಕಾರಣವಾಗಿದೆ.
ರಾಜ್ಯದಲ್ಲಿ ಒಕ್ಕಲಿಗ, ಲಿಂಗಾಯತ ಮತ್ತು ಕುರುಬ ಪ್ರಭಾವಿ ಜಾತಿಗಳೆಂದು ಗುರುತಿಸಲಟ್ಟಿವೆ. ವರದಿಯಲ್ಲಿ ನಮೂದಾಗಿರುವ ಈ ಜಾತಿಗಳ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಉಪ ಜಾತಿಗಳು, ಗುಂಪುಗಳ ಒಟ್ಟು ಜನಸಂಖ್ಯೆ ಈಗ ಚರ್ಚೆಯ ಕೇಂದ್ರ. ಪ್ರವರ್ಗ 2 ‘ಎ’ನಲ್ಲಿರುವ ಕೆಲವು ಸಮುದಾಯಗಳು ಲಿಂಗಾಯತ, ವೀರಶೈವ ಲಿಂಗಾಯತ ಎಂದು ಬರೆಸಿಲ್ಲ. ಈ ಸಮುದಾಯಗಳು ಒಳಗೊಂಡರೆ ಲಿಂಗಾಯತ ಜನಸಂಖ್ಯೆ ಒಂದು ಕೋಟಿ ಮೀರಲಿದೆ ಎನ್ನುವುದು ಆ ಸಮುದಾಯದ ವಾದ. ಉಪ ಪಂಗಡಗಳನ್ನೆಲ್ಲ ಕೈಬಿಟ್ಟು ಸಮೀಕ್ಷೆ ನಡೆಸಲಾಗಿದೆ ಎನ್ನುವುದು ಒಕ್ಕಲಿಗರ ಕೋಪ.
ವರದಿಯ ಪ್ರಕಾರ, ವೀರಶೈವ ಲಿಂಗಾಯತ ಜಾತಿಯ ಜನಸಂಖ್ಯೆ 10,49,706. ಲಿಂಗಾಯತ 95 ಉಪ ಗುಂಪುಗಳಲ್ಲಿ ಬೇಡುವ ಜಂಗಮ, ಲಿಂಗಾಯತ ವೀರಶೈವ, ವೀರಶೈವ ಪಂಚಮಸಾಲಿ, ಪಂಚಮಸಾಲಿ ಲಿಂಗಾಯತ, ಆದಿ ಬಣಜಿಗ, ಜಂಗಮ ಲಿಂಗಾಯತ, ಕುಡು ಒಕ್ಕಲಿಗ, ಲಿಂಗವಂತ, ಲಿಂಗಾಯತ್, ಲಿಂಗಾಯತ ಜಂಗಮ, ವೀರಶೈವ, ನೊಳಂಬ ಲಿಂಗಾಯತ್ ಪ್ರಮುಖವಾದವು. ಸಮೀಕ್ಷೆಯಲ್ಲಿ ನಮೂದಾಗಿರುವ ಈ 95 ಉಪ ಗುಂಪುಗಳ ಜನಸಂಖ್ಯೆಯನ್ನು ಸೇರಿಸಿದರೆ ಲಿಂಗಾಯತ ಜನಸಂಖ್ಯೆ 76,84,939 ಆಗುತ್ತದೆ.
ಒಕ್ಕಲಿಗ ಜನಸಂಖ್ಯೆ 40,04,830. ಅದರ ಅಡಿಯಲ್ಲಿರುವ ಗೌಡ ಒಕ್ಕಲಿಗ, ವಕ್ಕಲ್/ವಕ್ಕಲಿಗ, ರೆಡ್ಡಿ, ಕುಂಚಿಟಿಗ, ಗೌ, ರಡ್ಡಿ ಹೀಗೆ ಪಟ್ಟಿ ಮಾಡಿರುವ 47 ಜಾತಿಗಳನ್ನು ಸೇರಿಸಿದರೆ ಒಟ್ಟು ಜನಸಂಖ್ಯೆ 61,58, 352 ಆಗುತ್ತದೆ. ಆಯೋಗವು ‘ಅತ್ಯಂತ ಹಿಂದುಳಿದ’ ಎಂದು ಮರು ವರ್ಗೀಕರಿಸಿ ‘ಪ್ರವರ್ಗ 1ಬಿ’ಯಲ್ಲಿ ಕುರುಬ ಮತ್ತು ಅದರ ಉಪ ಜಾತಿಗಳನ್ನು ಪಟ್ಟಿ ಮಾಡಿದೆ. ಕುರುಬ ಜನಸಂಖ್ಯೆ 42,71,399. ಅದರ ಅಡಿಯಲ್ಲಿರುವ ಹಾಲುಮತ, ಕುರಬ್, ಕುರುಬ್ ಮುಂತಾದ 11 ಜಾತಿಗಳು ಸೇರಿದರೆ 43,72,847 ಜನಸಂಖ್ಯೆ ಆಗುತ್ತದೆ.
ಆಯೋಗದ ವಾದ: ‘ಆಯಾ ಜಾತಿಯ ಕುಲಕಸುಬು, ಆಚಾರ– ವಿಚಾರ, ಸಂಬಂಧಗಳು, ಸಂಸ್ಕೃತಿ ಇತ್ಯಾದಿ ಒಂದೇ ಆಗಿದ್ದು, ಎಲ್ಲ ಉಪ ಜಾತಿಗಳಿಗೂ ಇದು ಅನ್ವಯವಾಗುತ್ತದೆ. ಸಾಮಾಜಿಕ, ಶೈಕ್ಷಣಿಕ ಸೂಚ್ಯಂಕಗಳ ಆಧಾರದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಕೆಲವು ಉಪ ಜಾತಿಗಳನ್ನು ಈಗಿರುವ ಪ್ರವರ್ಗದಿಂದ ಬೇರೆ ಪ್ರವರ್ಗಗಳಿಗೆ ವರ್ಗಾಯಿಸಿದರೆ ಆಯಾ ಜಾತಿಯ ಉಪ ಜಾತಿ ಮತ್ತು ಮುಖ್ಯಜಾತಿಗಳ ಬಾಂಧವ್ಯ ಹಾಗೂ ಅಸ್ಮಿತೆಗೆ ಧಕ್ಕೆ ಉಂಟಾಗಬಹುದು. ಈ ಕಾರಣಕ್ಕೆ ಎಲ್ಲ ಉಪ ಜಾತಿಗಳನ್ನು ಸಂಬಂಧಿಸಿದ ಮುಖ್ಯ ಜಾತಿಗಳ ಅಡಿಯಲ್ಲಿಯೇ ತರಲಾಗಿದೆ. ಮುಖ್ಯ ಜಾತಿಯು ಯಾವ ಪ್ರವರ್ಗದಲ್ಲಿ ಸೇರ್ಪಡೆ ಆಗುತ್ತದೆಯೊ ಅದರ ಜೊತೆಗೆ ಉಪ ಜಾತಿಯನ್ನೂ ಸೇರಿಸಲಾಗಿದೆ’ ಎಂದು ಆಯೋಗವು ವರದಿಯಲ್ಲಿ ಪ್ರತಿಪಾದಿಸಿದೆ.
‘ಕೆಲವು ಜಾತಿಗಳು ಅವುಗಳು ಪಡೆದು ಸರಾಸರಿ ಅಂಕಗಳ ಆಧಾರದಲ್ಲಿ ಹಿಂದುಳಿದ ವರ್ಗಗಳೆಂದು ಗುರುತಿಸಿಕೊಂಡರೂ, ಸ್ವಾಭಾವಿಕವಾಗಿ ಅವುಗಳನ್ನು ಅತಿ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆಯೋಗವನ್ನು ಭೇಟಿ ಮಾಡಿ ವಿವಿಧ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳು ಸಲ್ಲಿಸಿದ್ದ ಮನವಿಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ. ಕೆಲವು ಜಾತಿಗಳು ಪಡೆದ ಸರಾಸರಿ ಅಂಕಗಳ ಆಧಾರದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿದ್ದರೂ, ಆ ಜಾತಿಗಳು ಇನ್ನೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು, ಅತಿ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಗುರುತಿಸಲ್ಪಡುವ ಅರ್ಹತೆ ಹೊಂದಿರುತ್ತದೆ. ಹಿಂದಿನ ಆಯೋಗಗಳ ವರದಿಯಲ್ಲಿ ಈ ಜಾತಿಗಳು ಅತ್ಯಂತ ಮತ್ತು ಅತಿ ಹಿಂದುಳಿದ ಪಟ್ಟಿಯಲ್ಲೇ ಗುರುತಿಸಲ್ಪಟ್ಟಿದೆ. ಈ ಕಾರಣದಿಂದಲೂ ಪ್ರಸ್ತಾಪಿಸಿರುವ ಕೆಲವು ಜಾತಿಗಳನ್ನು ಅತಿ ಹಿಂದುಳಿದ ಪಟ್ಟಿಯಲ್ಲಿಯೇ ಮುಂದುವರಿಸಲಾಗಿದೆ’ ಎಂದೂ ಆಯೋಗ ಸಮರ್ಥನೆ ನೀಡಿದೆ.
‘ಒಂದೇ ಹೆಸರಿನ ಜಾತಿಯ ಸ್ವರೂಪದ ಜಾತಿಯ ಹೆಸರಿನ ಉಚ್ಚಾರ, ಕಾಗುಣಿತ ಅಥವಾ ಹೋಲಿಕೆ ಕಂಡುಬಂದು ಸಂಕೇತ ಸಂಖ್ಯೆ ಒಂದೇ ಆಗಿದ್ದು, ಅಂತಹ ಸಂದರ್ಭದಲ್ಲಿ ಮೇಲ್ನೋಟಕ್ಕೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಯ ಗುಂಪಿಗೆ ಕಡಿಮೆ ಜನಸಂಖ್ಯೆಯನ್ನು ಸೇರಿಸಿ ಆಯಾಯ ಜಾತಿಯನ್ನು ಈಗಾಗಲೇ ಇರುವ ಪ್ರವರ್ಗದಲ್ಲಿಯೇ ಮುಂದುವರಿಸಲು ತೀರ್ಮಾನಿಸಲಾಗಿದೆ’ ಎಂದೂ ಆಯೋಗ ವರದಿಯಲ್ಲಿ ವಿವರಿಸಿದೆ.
ಜಾತಿ ಗಣತಿಯಲ್ಲಿ ಪರಿಶಿಷ್ಟ ಪಂಗಡದ ಸಂಖ್ಯೆ ಕಡಿಮೆ ತೋರಿಸಲಾಗಿದೆ. ದೋಷಪೂರಿತ ಈ ವರದಿಯನ್ನು ತಿರಸ್ಕರಿಸಿ, ನಮ್ಮ ಹಕ್ಕಿನ ಪಾಲಿಗೆ ಹೋರಾಡುವೆಬಿ. ಶ್ರೀರಾಮುಲು, ಬಿಜೆಪಿ ಮುಖಂಡ
ಜಾತಿ ಗಣತಿ ಹತ್ತು ವರ್ಷಗಳ ಹಳೆಯ ವರದಿ. ಮರು ಸಮೀಕ್ಷೆ ನಡೆಸಬೇಕು ಎಂಬ ಕೆಲವರ ಬೇಡಿಕೆಯನ್ನು ಒಪ್ಪಬಹುದು. ಹಾಗೆಂದು ಮರು ಸಮೀಕ್ಷೆ ಬೇಡಿಕೆ ಒಪ್ಪಿದ್ದೇನೆ ಎಂದಲ್ಲಕೆ.ಎನ್. ರಾಜಣ್ಣ, ಸಹಕಾರ ಸಚಿವ
ವರದಿಯ ಅಧ್ಯಯನ ನಡೆಯುತ್ತಿದ್ದು, ಕ್ಯಾಬಿನೆಟ್, ಸದನದಲ್ಲಿ ಚರ್ಚಿಸಿದ ಬಳಿಕವಷ್ಟೇ ಸ್ವೀಕರಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಜಾತಿಗಣತಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ, ಸಮೀಕ್ಷೆಗೆಂದು ನನ್ನ ಮನೆಗೆ ಯಾರೂ ಬಂದಿಲ್ಲ. ಇದು ಸರ್ಕಾರದ ಸಮಸ್ಯೆಯಲ್ಲ, ಸರ್ವೆ ಮಾಡಿರುವವರ ತಪ್ಪುಪಿ.ರವಿಕುಮಾರ್ (ಗಣಿಗ) ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.